ನ್ಯೂಸ್

ಯುವಕನ ಅಪಹರಿಸಿ ದರೋಡೆ; ಮೂವರಿಗೆ ಜೈಲು ಶಿಕ್ಷೆ

ಬೆಂಗಳೂರು: ಯುವಕನ ಅಪಹರಣ ಮಾಡಿ ದರೋಡೆ ಮಾಡಿದ್ದ ಮೂವರಿಗೆ 66ನೇ ಹೆಚ್ಚುವರಿ ಸಿಟಿ ಸಿವಿಲ್ ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಹುಳಿಮಾವು ನಿವಾಸಿಗಳಾದ ಮಂಜುನಾಥ್, ನಾರಾಯಣಸ್ವಾಮಿ ಮತ್ತು ಮನು ಅಪರಾಧಿಗಳು. ಮಂಜುನಾಥ್ ಮತ್ತು ನಾರಾಯಣಸ್ವಾಮಿಗೆ ತಲಾ 4 ವರ್ಷ ಜೈಲು ಹಾಗೂ ಮನು ಎಂಬಾತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎ. ಜಯಪ್ರಕಾಶ್ ತೀರ್ಪು ನೀಡಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್. ಪಾಟೀಲ್ ವಾದ ಮಂಡಿಸಿದ್ದರು. 2017ರ ಸೆ.12ರಂದು ಮಂಜುನಾಥ್, ನಾರಾಯಣಸ್ವಾಮಿ ಮತ್ತು ಮನು ಸಂಚುರೂಪಿಸಿ ಎಸ್. ದೀಪಕ್ ಎಂಬಾತನಿಗೆ ಮಾರಕಾಸಗಳನ್ನು ತೋರಿಸಿ ಬೆದರಿಸಿ ಅಪಹರಣ ಮಾಡಿದ್ದರು.

ಬಳಿಕ ಚಿನ್ನಾಭರಣ ಕಸಿದುಕೊಂಡು ಕಳುಹಿಸಿದ್ದರು. ಹುಳಿಮಾವು ಠಾಣೆ ಅಂದಿನ ಇನ್‌ಸ್ಪೆಕ್ಟರ್ ಜೆ. ಸಂಜೀವ್‌ಕುಮಾರ್, ಮೂವರನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.