ನ್ಯೂಸ್

ಕಿಡ್ನ್ಯಾಪ್ ಪ್ರಕರಣ- ಕಥೆ ಕಟ್ಟಿ ಹೇಳ್ತಿದ್ದಾರಾ ಮಾಜಿ ಶಾಸಕ ವರ್ತೂರು ಪ್ರಕಾಶ್ !?

ಕೋಲಾರ: ಮಾಜಿ ಶಾಸಕ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಎಂಟು ಅನಾಮಧೇಯರ ವಿರುದ್ಧ ಪ್ರಕರಣ ದಾಖಲಾಗಿದೆ. ವರ್ತೂರು ಪ್ರಕಾಶ್ ನೀಡಿರುವ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ, ಇದೆ ಮೊದಲ ಸಲ ವರ್ತೂರು ಪ್ರಕಾಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಲಿಖಿತ ದೂರಿನಲ್ಲಿ ಹೇಳಿದ ಅಂಶಗಳನ್ನೇ ಪುನರಾರ್ವತಿಸಿದ್ದಾರೆ.

‘ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಫಾರಂ ಹೌಸ್‌ನಿಂದ ನ.25ರ ಸಂಜೆ 7ಕ್ಕೆ ನನ್ನ ಕಾರು ಚಾಲಕ ಸುನೀಲ್ ಜತೆ ಫಾರ್ಚೂನರ್ ಕಾರಿನಲ್ಲಿ ಕೋಲಾರ ನಗರಕ್ಕೆ ತೆರಳುತ್ತಿದ್ದೆ. ಮಾರ್ಗಮಧ್ಯೆ ಅಪರಿಚಿತರು ಏಕಾಏಕಿ ಕಾರನ್ನು ಅಡ್ಡಗಟ್ಟಿ ಇನ್ನೊಂದು ಕಾರನ್ನು ಹಿಂದೆ ನಿಲ್ಲಿಸಿಕೊಂಡು ನನಗೆ ಇಳಿಯುವಂತೆ ಸೂಚಿಸಿದರು. ನಾನು ಇಳಿಯಲಿಲ್ಲ. ಕೂಡಲೇ ಒಳಕ್ಕೆ ನುಗ್ಗಿದ ದುಷ್ಕರ್ಮಿಗಳು ನನ್ನ ಮುಖಕ್ಕೆ ಮಂಕಿ ಕ್ಯಾಪ್ ಹಾಕಿದ್ರು, ಓಡಿ ಹೋಗಲೆತ್ನಿಸಿದ ಸುನೀಲ್​ಗೆ ಮಚ್ಚಿನಿಂದ ಹೊಡೆದು ಮತ್ತೆ ನನ್ನದೇ ಕಾರಿನಲ್ಲಿ ಕೂಡಿ ಹಾಕಿದರು. ಎರಡು ಕಾರಿನಲ್ಲಿದ್ರು ಅವರು. ಆ ಎರಡು ಕಾರುಗಳ ನಡುವೆ ನಮ್ಮ ಕಾರಿತ್ತು. ನಾಲ್ಕು ಗಂಟೆ ಕಾರಿನಲ್ಲೇ ಇದ್ದೆವು. ಕೊನೆಗೆ ಯಾವುದೋ ಕಾಡಿಗೆ ಕರೆದೊಯ್ದು ಅಲ್ಲಿ ಚಿತ್ರಹಿಂಸೆ ನೀಡಿದ್ರು.. 2 ಕೋಟಿ ರೂಪಾಯಿ ಕೂಡಲೇ ಕೊಡುವಂತೆ ಬೇಡಿಕೆ ಇಟ್ರು.

ಯಾರಿಗೂ ಅನುಮಾನ ಬಾರದಂತೆ ವರ್ತಿಸುವುದಕ್ಕೆ ನನಗೆ ಸೂಚಿಸಿದ್ದರು. ಹೀಗಾಗಿ ಏಟು ತಿಂದರೂ ಎಲ್ಲ ನೋವುಗಳನ್ನೂ ತಡ್ಕೊಂಡು ಅವರಿಗೆ 50 ಲಕ್ಷ ರೂಪಾಯಿ ಅರೇಂಜ್ ಮಾಡಿಸಿದೆ. ಅದನ್ನು ಪಡ್ಕೊಂಡು ಅಪಹರಣಕಾರರು ಬಳಿ ಹೊಸಕೋಟೆ ಬಳಿ ಇರುವ ಶಿವನಾಪುರ ಗ್ರಾಮದ ಮೈದಾನದಲ್ಲಿ ಬೆಳಗಿನ ಜಾವ 4 ಗಂಟೆಯಲ್ಲಿ ಕಾರಿನಿಂದ ನನ್ನ ತಳ್ಳಿ ಏನಾದರೂ ಪೊಲೀಸರಿಗೆ ದೂರು ಕೊಟ್ಟರೇ ನಿನ್ನ ಮತ್ತು ನಿನ್ನ ಮಕ್ಕಳನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿ ಹೋದರು. ಅಲ್ಲಿಂದ ರಸ್ತೆಗೆ ಬಂದು ಸಾರ್ವಜನಿಕರ ಕಾರು ನಿಲ್ಲಿಸಿ ಅದರಲ್ಲಿ ಕೆ.ಆರ್.ಪುರಕ್ಕೆ ಬಂದು ಸತ್ಯಸಾಯಿ ಆರ್ಥೋಪಿಡಿಕ್ ಆಸ್ಪತ್ರೆ ಡ್ರಾಪ್ ಪಡೆದು ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದೆ. ಕೊಲೆ ಬೆದರಿಕೆ ಹಾಕಿದ ಕಾರಣ ದೂರು ನೀಡುವುದಕ್ಕೆ ವಿಳಂಬ ಮಾಡಿದೆ. ಇವತ್ತು ಗೃಹ ಸಚಿವರನ್ನು ಭೇಟಿಯಾಗುತ್ತೇನೆ ನಾಲ್ಕಾರು ದಿನದಲ್ಲಿ ಅಪಹರಣಕಾರರನ್ನು ಪೊಲೀಸರು ಬಂಧಿಸುತ್ತಾರೆಂಬ ನಂಬಿಕೆ ಇದೆ ಎಂದಿದ್ದಾರೆ.

ಹಲ್ಲೆ ನಡೆಸಿದ್ದಾರೆ, ತಲೆಗೆ ರಾಡಿನಲ್ಲಿ ಹೊಡೆದಿದ್ದಾರೆ ಎಂದೆಲ್ಲ ಹೇಳುತ್ತಿರುವ ವರ್ತೂರು ಪ್ರಕಾಶ್ ವರ್ತನೆಗಳು ಅನೇಕ ಸಂದೇಹಗಳನ್ನು ಹುಟ್ಟುಹಾಕಿದ್ದು ಪ್ರಕರಣಕ್ಕೆ ಟ್ವಿಸ್ಟ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್)