Kichcha Sudeep: ನಿನ್ನೆ (ಜ.22) 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅಧಿಕೃತವಾಗಿ ಪ್ರಕಟವಾಯಿತು. ಪ್ರಶಸ್ತಿಗಳ ಪಟ್ಟಿಯಲ್ಲಿ 'ಪೈಲ್ವಾನ್' ಚಿತ್ರಕ್ಕಾಗಿ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ಆದರೆ, ಸುದೀಪ್ ಈ ಪ್ರಶಸ್ತಿಯನ್ನು ಸ್ವೀಕರಿಸಲು ಇದೀಗ ನಿರಾಕರಿಸಿದ್ದಾರೆ.
ಇದನ್ನೂ ಓದಿ: CM Siddaramaiah | ಸಿದ್ದರಾಮಯ್ಯನನ್ನು ಭೇಟಿ ಮಾಡಿದ ಸ್ಯಾಫ್ರಾನ್ ಕಂಪನಿಯ ಅಧ್ಯಕ್ಷ ರಾಸ್ ಮ್ಯಾಕಲ್ನೆಸ್
"ಕಳೆದ ಕೆಲವು ವರ್ಷಗಳಿಂದ ನಾನು ನನ್ನದೇ ಆದ ಕಾರಣಗಳಿಂದ ಪ್ರಶಸ್ತಿ ಸ್ವೀಕಾರ ಮಾಡುವುದನ್ನು ನಿಲ್ಲಿಸಿದ್ದೇನೆ. ಚಿತ್ರರಂಗದಲ್ಲಿ ನನಗಿಂತಲೂ ಅತ್ಯುತ್ತಮ ಕಲಾವಿದರಿದ್ದಾರೆ. ಈ ಪ್ರಶಸ್ತಿ ಅವರಿಗೆ ಸಿಕ್ಕರೆ ಇನ್ನೂ ಚೆನ್ನಾಗಿರುತ್ತದೆ. ಚಿತ್ರರಂಗದಲ್ಲಿನ ನನ್ನ ಸೇವೆ ನಿರಂತರವಾಗಿ ಮುಂದುವರೆಯುತ್ತದೆ. ಹೀಗಾಗಿ ಪ್ರಶಸ್ತಿ ಸ್ವೀಕರಿಸಲು ನಾನು ಇಚ್ಛಿಸುವುದಿಲ್ಲ. ಯಾವುದೇ ಪ್ರಶಸ್ತಿಯ ಆಕಾಂಕ್ಷಿಯಲ್ಲದೇ ನಾನು ಕೆಲಸ ಮಾಡಲು ಬಯಸುತ್ತೇನೆ" ಎಂದಿದ್ದಾರೆ.
"ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ತೀರ್ಪುಗಾರರ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಕಾರಣ, ಈ ಮನ್ನಣೆಯೇ ನನ್ನ ಪ್ರತಿಫಲ. ನನ್ನ ನಿರ್ಧಾರದಿಂದ ತೀರ್ಪುಗಾರರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ಬೇಸರವಾದಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಹಾಗೂ ನಾನು ಆಯ್ಕೆ ಮಾಡಿದ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬುತ್ತೇನೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ" ಎಂದು ಕಿಚ್ಚ ಸುದೀಪ್ ಟ್ವೀಟ್ ಮೂಲಕ ತಿಳಿಸಿದ್ದಾರೆ.