ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ (BiggBoss) 11ನೇ ಆವೃತ್ತಿ ಆರಂಭವಾಗಿ ನಾಲ್ಕು ವಾರಗಳು ಕಳೆದಿದ್ದು, ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮಾತೃ ವಿಯೋಗದಿಂದ ಕಳೆದ ಎರಡು ವಾರ ನಿರೂಪಕ ಕಿಚ್ಚ ಸುದೀಪ್ (Kichcha Sudeep) ವಾರದ ಪಂಚಾಯಿತಿಯನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಕಾರ್ಯಕ್ರಮಕ್ಕೆ ಮರಳಿದ್ದು, ಮನಸ್ಸು ಭಾರವಾಗಿದ್ರೂ ಜವಾಬ್ದಾರಿ ನಿಭಾಯಿಸೋಕೆ ಹಾಜರಾದ ಕಿಚ್ಚ ಎಂಬ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.
ಸುದೀಪ್ (Kichcha Sudeep) ಅವರ ತಾಯಿಯ ಆರೋಗ್ಯ ಗಂಭೀರವಾಗಿದ್ದ ಸಮಯದಲ್ಲೂ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಅಕ್ಟೋಬರ್ 20 ರಂದು ಸುದೀಪ್ ಅವರ ತಾಯಿ ಸರೋಜಮ್ಮನವರು ನಿಧನ ಹೊಂದಿದ್ದರು. ನೋವಿನಲ್ಲಿದ್ದ ಸುದೀಪ್ ಅಂದಿನ ವೀಕೆಂಡ್ ಪಂಚಾಯಿತಿ ನಡೆಸಿಕೊಡಲಿಲ್ಲ. ಅದಾದ ಮುಂದಿನ ವಾರದ ವೀಕೆಂಡ್ ಪಂಚಾಯ್ತಿಯನ್ನೂ ಸಹ ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಸುದೀಪ್ ತಮ್ಮ ಜವಾಬ್ದಾರಿ ನಿರ್ವಹಿಸಲು ಬಿಗ್‌ಬಾಸ್ (BiggBoss)ಮನೆಗೆ ಮರಳಿದ್ದು, ಬಿಗ್ ಬಾಸ್ ವತಿಯಿಂದ ಸುದೀಪ್ ಅವರ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಪರದೆಯಲ್ಲಿ ಸುದೀಪ್ ಅವರ ತಾಯಿಯ ಫೋಟೋವನ್ನು ಹಾಕಿ ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯದಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆಮನೆಗೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾದ ಭಾರ ಎಂದು ಪ್ರೋಮೋದ ಹಿನ್ನೆಲೆಯಲ್ಲಿ ಕೇಳಿಸುತ್ತದೆ. ತಾಯಿಯ ಫೋಟೋವನ್ನು ನೋಡಿ ಕಿಚ್ಚ ಸುದೀಪ್ ಭಾವುಕರಾಗಿದ್ದು, ಬಿಗ್‌ಬಾಸ್ (BiggBoss) ಸ್ಫರ್ಧಿಗಳು ಹಾಗೂ ವೀಕ್ಷಕರು ಸುದೀಪ್ ಅವರನ್ನು ಕಂಡು ಭಾವುಕರಾಗಿದ್ದಾರೆ.
ಬಿಗ್‌ಬಾಸ್ (BiggBoss) ಕನ್ನಡ 11ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ಗೌತಮಿ ಮತ್ತು ತ್ರಿವಿಕ್ರಮ್ ಬಿಟ್ಟು ಎಲ್ಲರೂ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್ ಮಾಡಿದ್ದರು. ಮಿಕ್ಕಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ , ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್ , ಐಶ್ವರ್ಯಾ, ಧನ್‌ರಾಜ್, ಶಿಶರ್ ಶಾಸ್ತ್ರಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ವಾರ ಮನೆಯಿಂದ ದೀಪಾವಳಿ ಉಡುಗೊರೆಯಾಗಿ ಯಾರಿಗೆ ಸಿಹಿ ಮತ್ತು ಯಾರಿಗೆ ಕಹಿ ಎಂಬುದನ್ನು ಕಾದು ನೋಡಬೇಕಿದೆ.