ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ತನ್ನ ಕಾರ್ಯಶೈಲಿ ಬದಲಿಸಿಕೊಳ್ಳಲು ಮುಂದಾಗಿದೆ. ಸಾರ್ವಜನಿಕರಿಗೆ ನಿವೇಶನ ಒದಗಿಸಲು ಹಾಗೂ ಮನೆಗಳನ್ನು ನಿರ್ವಿುಸಿಕೊಡಲು ಇನ್ನು ಮುಂದೆ ಗೃಹ ಮಂಡಳಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಬದಲು ರೈತರ ಸಹಭಾಗಿತ್ವದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಆಲೋಚಿಸಿದೆ.
1956ರಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರು ಗೃಹ ಮಂಡಳಿಯು ತದನಂತರ ಕರ್ನಾಟಕ ಗೃಹ ಮಂಡಳಿಯಾಗಿ ಮರುನಾಮಕರಣಗೊಂಡಿದೆ. ಜನರಿಗೆ ಮನೆ, ನಿವೇಶನ ಒದಗಿಸುವುದಕ್ಕಾಗಿ ಅಸ್ತಿತ್ವಕ್ಕೆ ಬಂದ ಪ್ರಮುಖ ಸ್ವಾಯುತ್ತ ಸಂಸ್ಥೆ ಇದಾಗಿದೆ. ವಸತಿ ಯೋಜನೆ ರೂಪಿಸುವುದು, ಇದಕ್ಕೆ ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಂಡು ನಿವೇಶನ ಅಥವಾ ಗೃಹ ನಿರ್ಮಾಣ ಮಾಡಿ ಜನರಿಗೆ ವಿತರಿಸುವುದು ಸಂಸ್ಥೆಯ ಪ್ರಮುಖ ಧ್ಯೇಯೋದ್ದೇಶ. ಈ ಉದ್ದೇಶ ಈಡೇರಿಸಲು ಮಂಡಳಿಯು ಹಲವಾರು ದಶಕಗಳಿಂದ ಕಾರ್ಯಗೈದು, ಲಕ್ಷಾಂತರ ಜನರಿಗೆ ನಿವೇಶನ- ಮನೆಗಳನ್ನು ಒದಗಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯದಲ್ಲಿ ಅಡಚಣೆಗಳನ್ನು ಎದುರಿಸುತ್ತಿದೆ. ಇದರಲ್ಲಿ ಪ್ರಮುಖವಾದದು ಭೂಸ್ವಾಧೀನ ಪ್ರಕ್ರಿಯೆ.
ಮಂಡಳಿ ನಿರ್ವಿುಸುವ ನಿವೇಶನಗಳಿಗೆ ಬೇಡಿಕೆ ಇರುವುದರಿಂದ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ವಿಶಾಲ ಸ್ಥಳದಲ್ಲಿಯೇ ಸಾಮಾನ್ಯವಾಗಿ ಬಡಾವಣೆಗಳನ್ನು ರೂಪಿಸುತ್ತ ಬರಲಾಗಿದೆ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಜಮೀನು ಸ್ವಾಧೀನ ಅಗತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಭೂಸ್ವಾಧೀನಕ್ಕೆ ರೈತರಿಂದ ತಕರಾರುಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ಯೋಜನೆಗಳಿಗೆ ಭೂಸ್ವಾಧೀನ ತಡೆ ಸಾಧ್ಯವಿಲ್ಲದಿದ್ದರೂ ನ್ಯಾಯಾಲಯಗಳಲ್ಲಿ ಭೂಸ್ವಾಧೀನ ಪರಿಹಾರ ಸೇರಿ ವಿವಿಧ ರೀತಿಯ ವ್ಯಾಜ್ಯಗಳನ್ನು ಮಂಡಳಿ ಎದುರಿಸುವಂತಾಗಿದೆ. ಇದರಿಂದಾಗಿ ನಿವೇಶನ ನಿರ್ವಣ, ಹಂಚಿಕೆಯಲ್ಲೂ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯು ತನ್ನ ಮೂಲ ಧ್ಯೇಯೋದ್ದೇಶ ಬದಲಿಸಿಕೊಳ್ಳಲು ಆಲೋಚಿಸಿದೆ. ಭೂಸ್ವಾಧೀನ ಸಮಸ್ಯೆಗೆ ಪರ್ಯಾಯವಾಗಿ ರೈತರ ಸಹಭಾಗಿತ್ವದೊಂದಿಗೆ ಬಡಾವಣೆ ನಿರ್ವಿುಸಲು ಯೋಜನೆ ರೂಪಿಸಿದೆ.
ಕನಿಷ್ಠ 50 ಎಕರೆ ಭೂಮಿ ಒದಗಿಸಲು ಮುಂದಾಗುವ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ನಿವೇಶನಗಳನ್ನು ಅಭಿವೃದ್ಧಿಪಡಿಸುತ್ತೇವೆ. ಜಿಲ್ಲಾ ಮಟ್ಟದಲ್ಲಿ ಈ ಸಹಭಾಗಿತ್ವದಡಿ ಭೂಮಿ ಒದಗಿಸುವ ರೈತರಿಗೆ ಹಾಗೂ ಬಡಾವಣೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮಂಡಳಿಗೆ ಶೇ. 50ರಷ್ಟು ನಿವೇಶನ ಸಮಪಾಲು ಹಂಚಿಕೆ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು. ತಾಲ್ಲೂಕು ಮಟ್ಟದಲ್ಲಿ ಶೇ. 60 ಹಾಗೂ ಶೇ. 40 ರ ಅನುಪಾತದಲ್ಲಿ ಈ ಒಪ್ಪಂದ ಇರಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಂಡಳಿ ಪರ್ಯಾಯ ಆಲೋಚನೆಗೆ ಮುಂದಾಗಿರುವುದು ಪ್ರಸ್ತುತವೇ ಆಗಿದೆ. ಆದರೆ, ಇದು ರಿಯಲ್ ಎಸ್ಟೇಟ್ ದಂಧೆಕೋರರ ಲಾಭಕ್ಕೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಭೂಮಿಗೆ ಚಿನ್ನದ ದರ ಇರುವುದರಿಂದ ಈ ಯೋಜನೆಯ ದುರ್ಲಾಭ ಆಗದಂತೆ, ರೈತರಿಗೆ ತೊಂದರೆ ಆಗದಂತೆ ಸರ್ಕಾರ ಎಚ್ಚರ ವಹಿಸಬೇಕಿದೆ.