ನ್ಯೂಸ್

ಕೆಎಚ್‌ಬಿಯಿಂದ ರಾಜ್ಯಾದ್ಯಂತ 10 ಸಾವಿರ ಮನೆ ನಿರ್ಮಾಣದ ಗುರಿ

ಶಿವಮೊಗ್ಗ: ಕರ್ನಾಟಕ ಗೃಹ ಮಂಡಳಿಯಿಂದ ರಾಜ್ಯಾದ್ಯಂತ 10 ಸಾವಿರ ಮನೆ ನಿರ್ಮಿಸಿ ಸೂರಿಲ್ಲದವರಿಗೆ ನೀಡುವಂತಹ ಯೋಜನೆ ರೂಪಿಸಲಾಗಿದೆ ಎಂದು ಮಂಡಳಿ ಆಯುಕ್ತ ಕೆ.ಎ.ದಯಾನಂದ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಜಿ ಪ್ಲಸ್ 3 ಮಾದರಿ ಮನೆಗಳನ್ನು ನಿರ್ಮಿಸಿ ವಿತರಿಸುವ ಬಗ್ಗೆ ಈಗಾಗಲೇ ತಯಾರಿ ಮಾಡಿಕೊಳ್ಳಲಾಗಿದೆ ಎಂದರು. ರಾಜ್ಯಾದ್ಯಂತ ಕೆಎಚ್‌ಬಿಗೆ ಸೇರಿದ ಸಾಕಷ್ಟು ನಿವೇಶನಗಳಿವೆ. ಅವೆಲ್ಲವನ್ನೂ ಕ್ರೂಢೀಕರಿಸುವ ಕೆಲಸ ಶೇ.75ರಷ್ಟು ಪೂರ್ಣಗೊಂಡಿದೆ. ಆ ನಿವೇಶನಗಳನ್ನು ಹರಾಜು ಮಾಡುವ ಅಥವಾ ಹಂಚಿಕೆ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಧಿಕಾರಿಗಳು ಪ್ರಸ್ತುತ ಸನ್ನಿವೇಶದಲ್ಲಿ ಆತ್ಮಾವಲೋಕ ಮಾಡಿಕೊಳ್ಳುವ ಅಗತ್ಯವಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದ ಅವರು, ಪ್ರಸ್ತುತ ದಿನಮಾನಗಳಲ್ಲಿ ಕಾನೂನುಬಾಹಿರ ಲೇಔಟ್‌ಗಳು ಹೆಚ್ಚಾಗುತ್ತಿದ್ದು, ಅದನ್ನು ತಡೆಯುವ ಸಲುವಾಗಿ ಇ-ಸ್ವತ್ತು ಯೋಜನೆ ಜಾರಿಗೆ ತರಲಾಯಿತು ಎಂದರು.

ಸಾರ್ವಜನಿಕ ಆಸ್ತಿಗೆ ಸಂಬಂಧಿಸಿದಂತೆ ಇ-ಖಾತಾ ವ್ಯವಸ್ಥೆ ಜಾರಿಗೆ ತಂದಿದ್ದು, ನನ್ನ ವೃತ್ತಿಯಲ್ಲಿ ಮಹತ್ತರ ಬೆಳವಣಿಗೆ. ಅದಕ್ಕೆ ಸರ್ಕಾರದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರ ಪರಿಣಾಮ ಇಂದು ರಾಜ್ಯಾದ್ಯಂತ ಇ-ಖಾತಾ ವ್ಯವಸ್ಥೆ ಜಾರಿಗೊಳ್ಳುತ್ತಿದೆ. ಇದನ್ನು ನೋಡಿ ನೆರೆಯ ರಾಜ್ಯಗಳಲ್ಲೂ ಇ-ಖಾತಾ ಅನುಷ್ಠಾನಗೊಳಿಸಲಾಗುತ್ತಿದೆ. - ಕೆ.ಎ.ದಯಾನಂದ್, ಕರ್ನಾಟಕ ಗೃಹ ಮಂಡಳಿ ಆಯುಕ್ತ