ನ್ಯೂಸ್

ನಾವು ಕಳೆದ 30 ವರ್ಷದಿಂದ... ಪಹಲ್ಗಾಮ್​ ದಾಳಿ ಬೆನ್ನಲ್ಲೇ ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್​ ರಕ್ಷಣಾ ಸಚಿವ! Khawaja Asif

Khawaja Asif : ಪಾಕಿಸ್ತಾನ ಭಯೋತ್ಪಾದಕರ ತವರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಉಗ್ರರನ್ನು ಪೋಷಿಸಿ, ಬೆಳೆಸುವ ಮೂಲಕ ಇಡೀ ಮಾನವ ಕುಲಕ್ಕೆ ಪಾಕಿಸ್ತಾನ ಕಂಟಕಪ್ರಾಯದಂತಿದೆ. ಆದರೆ, ಪಾಕ್​ ಮಾತ್ರ ನಾವು ಉಗ್ರರಿಗೆ ಬೆಂಬಲ ನೀಡುವುದೇ ಇಲ್ಲ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇದೆ. ಆದರೆ, ಕೊನೆಗೂ ಪಾಕ್​ ನಿಜ ಒಪ್ಪಿಕೊಂಡಿದೆ. ಕಳೆದ 3 ದಶಕಗಳಿಂದ ಉಗ್ರರಿಗೆ ಬೆಂಬಲ ಮತ್ತ ತರಬೇತಿ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಇದಕ್ಕೆಲ್ಲ ಅಮೆರಿಕ ಮತ್ತು ಪಶ್ಚಿಮ ರಾಷ್ಟ್ರಗಳು ಕಾರಣ ಎಂದು ಆರೋಪ ಹೊರಿಸಿದೆ.

ಪಾಕಿಸ್ತಾನ ಭಯೋತ್ಪಾದಕರ ನೆಲೆಯಾಗಿದೆ ಎಂಬುದನ್ನು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವರೇ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದರು. ಭಯೋತ್ಪಾದಕ ಸಂಘಟನೆಗಳನ್ನು "ಬೆಂಬಲಿಸುವ" ಪಾಕಿಸ್ತಾನದ ದೀರ್ಘ ಇತಿಹಾಸದ ಬಗ್ಗೆ ಪತ್ರಕರ್ತೆ ಯಾಲ್ಡಾ ಹಕೀಮ್ ಕೇಳಿದಾಗ, ಖವಾಜಾ ಆಸಿಫ್ ಕೊಟ್ಟ ಉತ್ತರ ಪಾಕಿಸ್ತಾನದ ನೀಚ ಮನಸ್ಥಿತಿಯನ್ನು ಬಹಿರಂಗಪಡಿಸಿದೆ.

ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು, ತರಬೇತಿ ಮತ್ತು ಬೆಂಬಲ ನೀಡುವ ಬಗ್ಗೆ ಪತ್ರಕರ್ತೆ ಪ್ರಶ್ನಿಸಿದಾಗ, ಆಸಿಫ್​ ಸತ್ಯವನ್ನು ಒಪ್ಪಿಕೊಂಡರು. ಕಳೆದ 30 ವರ್ಷಗಳಿಂದ ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮ ರಾಷ್ಟ್ರಗಳಿಗಾಗಿ ಈ ಎಲ್ಲ ಕೊಳಕು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು. ಅಲ್ಲದೆ, ಇದು ನಾವು ಮಾಡಿದ ತಪ್ಪು. ಇದರಿಂದ ನಾವು ತುಂಬಾ ಅನುಭವಿಸಿದ್ದೇವೆ. ನಾವು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು 9/11 ದಾಳಿಯ ನಂತರದಲ್ಲಿ ಅಮೆರಿಕ ಜತೆ ಕೈಜೋಡಿಸದೇ ಇದ್ದಿದ್ದರೆ, ಪಾಕಿಸ್ತಾನದ ವಿರುದ್ಧದ ಇಂತಹ ಆರೋಪಗಳನ್ನು ಮಾಡಲು ಆಗುತ್ತಿರಲಿಲ್ಲ ಎಂದರು.

ಅಂದಹಾಗೆ, ಸೋವಿಯತ್ ಒಕ್ಕೂಟದ ವಿರುದ್ಧದ ಶೀತಲ ಸಮರದ ಸಮಯದಲ್ಲಿ ಪಾಕಿಸ್ತಾನ ಅಮೆರಿಕವನ್ನು ಬೆಂಬಲಿಸಿತು ಮತ್ತು 2001, ಸೆಪ್ಟೆಂಬರ್ 11ರಂದು ನ್ಯೂಯಾರ್ಕ್‌ನಲ್ಲಿ ಅಲ್-ಖೈದಾ ನಡೆಸಿದ ಭಯೋತ್ಪಾದಕ ದಾಳಿಯ ನಂತರ ಅಫ್ಘಾನಿಸ್ತಾನದ ಮೇಲಿನ ಆಕ್ರಮಣವನ್ನು ಸಹ ಪಾಕ್​ ಬೆಂಬಲಿಸಿತು. ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಲು ಅಮೆರಿಕ ಭಯೋತ್ಪಾದಕರನ್ನು "ಪ್ರಾಕ್ಸಿ"ಗಳಾಗಿ ಬಳಸಿಕೊಂಡಿತು ಎಂದು ಆಸಿಫ್ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಪಹಲ್ಗಾಮ್​ ದಾಳಿಯ ಬಗ್ಗೆ ಮಾತನಾಡಿದ ಆಸಿಫ್, ಪಾಕಿಸ್ತಾನಕ್ಕೆ ಬಿಕ್ಕಟ್ಟನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಭಾರತವು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಆಯೋಜಿಸಿದೆ ಎಂದರು. ಲಷ್ಕರ್-ಎ-ತೊಯ್ಬಾ ಅಸ್ತಿತ್ವದಲ್ಲಿಲ್ಲ ಎಂದು ನಿರ್ಲಜ್ಜವಾಗಿ ಪ್ರತಿಪಾದಿಸಿದ ಆಸಿಫ್​, ದಾಳಿಯ ಹೊಣೆ ಹೊತ್ತ ಭಯೋತ್ಪಾದಕ ಸಂಘಟನೆಯ ಒಂದು ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಬಗ್ಗೆ ಎಂದಿಗೂ ಕೇಳಿಯೇ ಇಲ್ಲ ಎಂದರು. ಲಷ್ಕರ್ ಎಂಬುದು ಹಳೆಯ ಹೆಸರು. ಅದು ಈಗ ಅಸ್ತಿತ್ವದಲ್ಲಿಲ್ಲ. ನಮ್ಮ ಸರ್ಕಾರ ಅದನ್ನು (ಪಹಲ್ಗಾಮ್ ದಾಳಿ) ಸ್ಪಷ್ಟವಾಗಿ ಖಂಡಿಸಿದೆ. ಪಾಕಿಸ್ತಾನ ದಶಕಗಳಿಂದ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ಆಸಿಫ್ ಹೇಳಿದರು.

2019ರ ಪುಲ್ವಾಮಾ ದಾಳಿಯ ನಂತರ ಬಾಲಕೋಟ್ ವೈಮಾನಿಕ ದಾಳಿಯಂತೆಯೇ ಭಾರತವು ಮಿಲಿಟರಿ ಪ್ರತೀಕಾರದ ಬಗ್ಗೆ ಪಾಕಿಸ್ತಾನಕ್ಕೆ ಕಳವಳವಿದೆಯೇ ಎಂದು ಕೇಳಿದಾಗ, ಆಸಿಫ್ "ಸಂಪೂರ್ಣ ಯುದ್ಧ"ದ ಬಗ್ಗೆ ಎಚ್ಚರಿಸಿದರು. ಒಂದು ವೇಳೆ ಸಂಪೂರ್ಣ ದಾಳಿ ಅಥವಾ ಅಂತಹದ್ದೇನಾದರೂ ನಡೆದರೆ, ಖಂಡಿತವಾಗಿಯೂ ಸಂಪೂರ್ಣ ಯುದ್ಧ ನಡೆಯುತ್ತದೆ. ಎರಡು ಪರಮಾಣು ಶಕ್ತಿಗಳ ನಡುವಿನ ಘರ್ಷಣೆ ಯಾವಾಗಲೂ ಆತಂಕಕಾರಿ ಎಂದರು. (ಏಜೆನ್ಸೀಸ್​)