ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ಪತ್ನಿಯ ಹೆಸರಿಗೆ ಮಂಜೂರಾಗಿದ್ದ 14 ನಿವೇಶನಗಳನ್ನು ವಾಪಸ್ ಮಾಡಿ, ಪ್ರಕರಣದ ತೀವ್ರತೆ ಕಡಿಮೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲೇ ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರೂ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಟ್ರಸ್ಟ್ಗೆ ಮಂಜೂರಾಗಿದ್ದ ಐದು ಎಕರೆ ಭೂಮಿಯನ್ನು ಕೆಐಎಡಿಬಿಗೆ ವಾಪಸ್ ಮಾಡಿದ್ದಾರೆ. ಈ ನಿರ್ಧಾರ ಹೊಸ ಚರ್ಚೆಗೂ ಕಾರಣವಾಗಿದೆ. ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಲ್ಲಿಕಾರ್ಜುನ ಖರ್ಗೆ, ಟ್ರಸ್ಟ್ ಅಧ್ಯಕ್ಷರನ್ನೇ ಕೇಳಿ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸಿದ್ದ ಸಿಎ ನಿವೇಶನ ಹಂಚಿಕೆಯಾಗಿತ್ತು. ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್ ಪಾರ್ಕ್ನಲ್ಲಿ ಐದು ಎಕರೆ ನಿವೇಶನ ಟ್ರಸ್ಟ್ಗೆ ಮಂಜೂರಾಗಿತ್ತು. ಪರಿಶಿಷ್ಟ ಜಾತಿ ಪಂಗಡದ ಕೋಟಾದಡಿಯಲ್ಲಿ ಒಟ್ಟು ಆರು ಮಂದಿ ಈ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು.
ಇದರಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡ ಇತ್ತು. ಅರ್ಜಿಯನ್ನು ಆದ್ಯತೆ ಮೇಲೆ ಪರಿಗಣಿಸಿದ್ದ ಏಕಗವಾಕ್ಷಿ ಸಮಿತಿ ಅಪೂರ್ಣ ದಾಖಲೆ ಕಾರಣಕ್ಕೆ ನಾಲ್ಕು ಅರ್ಜಿಗಳನ್ನು ತಿರಸ್ಕರಿಸಿತ್ತು. ಈ ಐದು ಎಕರೆ ಜಾಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯಲು 25 ಕೋಟಿ ರೂ. ಹೂಡಿಕೆ ಮಾಡುವುದಾಗಿಯೂ, ಇದರಿಂದ 150 ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಟ್ರಸ್ಟ್ ಪ್ರಸ್ತಾವನೆ ಮಾಡಿತ್ತು.
ರಾಜ್ಯಪಾಲರ ಅಂಗಳಕ್ಕೆ: ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈ ಪ್ರಕರಣದಲ್ಲಿ ತನಿಖೆ ಅವಶ್ಯವಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದರು. ರಾಜ್ಯಪಾಲರು ಸಮಗ್ರ ವರದಿ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು. ಹೀಗಾಗಿ ಈ ವಿಚಾರ ರಾಜ್ಯಕ್ಕೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿ, ಕಾಂಗ್ರೆಸ್ ಹೈಕಮಾಂಡ್ಗೆ ಉಸಿರುಗಟ್ಟಿಸಿತ್ತು.
ಕಲಬುರಗಿಯಲ್ಲಿ 19 ಎಕರೆ ಜಮೀನು: ಕೆಐಎಡಿಬಿ ಜಮೀನು ವಾಪಸ್ ಬೆನ್ನಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಟ್ರಸ್ಟ್ ಹೊಂದಿರುವ ಜಮೀನಿನ ಕುರಿತು ಜಿಜ್ಞಾಸೆ ಶುರುವಾಗಿದೆ. ಸಿದ್ಧಾರ್ಥ ವಿಹಾರ ಟ್ರಸ್ಟ್ನ ಪಾಲಿ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ 19 ಎಕರೆ ಜಮೀನು ಪಡೆದಿದ್ದು, ಇದು ಅಕ್ರಮ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಸ್ಥಳೀಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಆರೋಪಿಸಿದ್ದರು. ಲೋಕಾಯುಕ್ತರಿಗೆ ದೂರು ಸಹ ನೀಡಲಾಗಿತ್ತು. ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಕಲ್ಯಾಣ ಮಂಟಪವನ್ನು ಅನಧಿಕೃತವಾಗಿ ಖರ್ಗೆ ನೇತೃತ್ವದ ಕರ್ನಾಟಕ ಪೀಪಲ್ ಶಿಕ್ಷಣ ಸಂಸ್ಥೆ ಕಚೇರಿಯನ್ನಾಗಿ ಬಳಸಲಾಗುತ್ತಿದೆ. ಬಡ ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕಿದ್ದ ಕಲ್ಯಾಣ ಮಂಟಪವನ್ನು ಅನಧಿಕೃತವಾಗಿ ಕಚೇರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಮಾಡಲಾಗಿತ್ತು.
ವಿವಾದದ ಗೂಡು: ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್ಗೆ ಆದ್ಯತೆ ಮೇಲೆ ಐದು ಎಕರೆ ಹಂಚಿಕೆಯಲ್ಲಿ ಸ್ವಜನಪಕ್ಷಪಾತ ಎಸಗಲಾಗಿದ್ದು, ಇದು ಕಾನೂನು ಬಾಹಿರ ಎಂದು ಆರೋಪ ಕೇಳಿಬಂದಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ಆರೋಪ ಹೊರಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಈ ನಿವೇಶನ ಹಂಚಿಕೆಯನ್ನು ಸಮರ್ಥನೆ ಮಾಡಿಕೊಂಡಿತ್ತು. ಎಲ್ಲೂ ತಪ್ಪಾಗಿಲ್ಲ. ನಿವೇಶನ ಪಡೆಯಲು ಟ್ರಸ್ಟ್ಗೆ ಅರ್ಹತೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ವಾದಿಸಿದ್ದರು.
ವಾಪಸ್ ನಿರ್ಧಾರ: 2024ರ ಸೆಪ್ಟೆಂಬರ್ 20ರಂದೇ ಟ್ರಸ್ಟ್ ಕೆಐಎಡಿಬಿಗೆ ಪತ್ರ ಬರೆದು ತನಗೆ ಹಂಚಿಕೆಯಾದ ನಿವೇಶನ ವಾಪಸ್ ಮಾಡುತ್ತಿರುವುದಾಗಿ ತಿಳಿಸಿದೆ. ಆದರೆ ಇಲ್ಲಿವರೆಗೂ ಪತ್ರ ಬಹಿರಂಗವಾಗಿರಲಿಲ್ಲ. ಭಾನುವಾರ ಈ ವಿಚಾರವನ್ನು ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಿದ್ದು, ಇದರಲ್ಲಿ ಸಹೋದರ ರಾಹುಲ್ ಖರ್ಗೆ ತಪ್ಪೇನು ಇರಲಿಲ್ಲ, ನಿವೇಶನ ಪಡೆಯಲು ತರಾತುರಿಯೂ ಇರಲಿಲ್ಲ. ರಾಜಕೀಯ ಆರೋಪವಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಟ್ರಸ್ಟ್ ಅಧ್ಯಕ್ಷರಾದ ರಾಹುಲ್ ಖರ್ಗೆ ಮೃದು ಸ್ವಭಾವದವರು. ತಮ್ಮಿಂದಾಗಿ ಕುಟುಂಬದ ಸದಸ್ಯರಿಗೆ ಹಿಂಸೆಯಾಗುತ್ತಿದೆ ಎಂದು ನೊಂದಿದ್ದು, ಈ ಕಾರಣಕ್ಕೆ ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ನಿವೇಶನವನ್ನು ಕಾನೂನಾತ್ಮಕವಾಗಿ ಮರಳಿ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎ ಸೈಟ್ ತೆಗೆದುಕೊಳ್ಳುವ ಬಗ್ಗೆ ರಾಹುಲ್ ಖರ್ಗೆ ನಿರ್ಧಾರ ಮಾಡಿದ್ದರು. ಈಗ ಅವರೇ ಇಷ್ಟ ಇಲ್ಲ ಎಂದು ಮರಳಿಸಿದ್ದಾರೆ. ಇದೊಂದು ರಾಜಕೀಯ ಆರೋಪ ಅಷ್ಟೇ. ಬಿಜೆಪಿಯವರು ಮನುಸ್ಮೃತಿ ಸ್ವಭಾವದವರು. ಚುಚ್ಚು ಮಾತುಗಳಿಂದ ತೇಜೋವಧೆ ಮಾಡುತ್ತಾರೆ.
| ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವ
ಅಧಿಸೂಚನೆಯನ್ನು ರದ್ದುಪಡಿಸಿ, ಆಗಿರುವ ತಪು್ಪಗಳನ್ನು ಸರಿಪಡಿಸಿಕೊಳ್ಳಬೇಕು. ತಪು್ಪ ಮಾಡಿ ಮೈಪರಚಿಕೊಳ್ಳುವುದು ಸಚಿವ ಪ್ರಿಯಾಂಕ್ ಖರ್ಗೆಗೆ ಗೊತ್ತಿದೆ. ರಾಹುಲ್ ಖರ್ಗೆ ಸ್ವಭಾವವನ್ನು ನೋಡಿ ಪ್ರಿಯಾಂಕ್ ಖರ್ಗೆ ಒಂದಿಷ್ಟು ಕಲಿಯಲಿ.
| ಛಲವಾದಿ ನಾರಾಯಣ ಸ್ವಾಮಿ ಪರಿಷತ್ ವಿಪಕ್ಷದ ನಾಯಕ
ಖರ್ಗೆ ಕುಟುಂಬದ ಟ್ರಸ್ಟ್ ತನಗೆ ಮಂಜೂರಾದ ಐದು ಎಕರೆ ನಿವೇಶನವನ್ನು ಕೆಐಎಡಿಬಿಗೆ ಹಿಂತಿರುಗಿಸಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ. ಅಷ್ಟಕ್ಕೂ ಇದು ಸಿಎಂ ಕುರ್ಚಿಯತ್ತ ದಾಪುಗಾಲು ಹಾಕುವ ತಂತ್ರ ಎನ್ನಬಹುದು.
| ಲೆಹರ್ ಸಿಂಗ್ ಸಿರೋಯ, ರಾಜ್ಯಸಭಾ ಸದಸ್ಯ