Patna: ಕಳೆದ ಎರಡು ದಶಕಗಳಿಂದ ಬಿಹಾರ ರಾಜ್ಯವನ್ನು (Bihar Election) ಆಳುತ್ತಿರುವ ಬಿಜೆಪಿ-ಜೆಡಿಯು ನೇತೃತ್ವದ ಮೈತ್ರಿಕೂಟ ಬಿಹಾರದ ಜನರ ಕನಸ್ಸುಗಳನ್ನು ಕಸಿದುಕೊಂಡಿದ್ದು, ಮತ್ತೆ ಈಗ ರಾಜ್ಯದ ಸ್ವಾಭಿಮಾನವನ್ನು ಪುನಸ್ಥಾಪಿಸುವ ಸಮಯ ಬಂದಿದೆ ಆದ್ದರಿಂದ ಎಲ್ಲರು ಮಹಾಘಟಬಂಧನ್‌ಗೆ ಬೆಂಬಲ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಉದ್ಯೋಗ ಮತ್ತು ಅಭಿವೃದ್ಧಿಯಲ್ಲಿ ಆಡಳಿತ ಪಕ್ಷವನ್ನು ಟೀಕಿಸಿದ್ದು, ಮಹಾಘಟಬಂಧನದ ನ್ಯಾಯಕ್ಕಾಗಿ ಸಂಕಲ್ಪವನ್ನು ನವೀಕರಿಸುವ ಸಮಯ ಬಂದಿದೆ ಎಂದರು.
ಬಿಹಾರದ ಜನರು ಎಲ್ಲಿಗೆ ಹೋದರೂ, ಅವರ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಆ ಸ್ಥಳದ ಸಮೃದ್ಧಿಗೆ ಕೊಡುಗೆ ನೀಡುತ್ತಾರೆ ಎಂದು ಹೇಳಿದ್ದಾರೆ. ಹೀಗಿದ್ದಾಗ ಇಲ್ಲಿನ ಜನ ತಮ್ಮದೇ ಆದ ಬಿಹಾರದ ಭವಿಷ್ಯವನ್ನು ಬದಲಾಯಿಸಲು ಏಕೆ ಸಾಧ್ಯವಾಗಿಲ್ಲ.?, ಏಕೆಂದರೆ ಕಳೆದ 20 ವರ್ಷಗಳಲ್ಲಿ ಬಿಹಾರದ ಯುವಕರಿಂದ ಬಿಜೆಪಿ-ಜೆಡಿಯು ಪ್ರತಿಯೊಂದು ಅವಕಾಶ ಮತ್ತು ಕನಸನ್ನು ಕಸಿದುಕೊಂಡಿದೆ. ಅವರನ್ನು ಕಾರ್ಮಿಕರಾಗುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಕೈಗಾರಿಕಾ ವಲಯದ ಉದ್ಯೋಗದ ವಿಷಯದಲ್ಲಿ ಬಿಹಾರ ರಾಷ್ಟ್ರೀಯವಾಗಿ 23 ನೇ ಸ್ಥಾನದಲ್ಲಿದೆ, ರಾಜ್ಯಾದ್ಯಂತ ಕೇವಲ 1.3 ಲಕ್ಷ ಜನರು ಮಾತ್ರ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕೇವಲ 36,135 ಜನರು ಮಾತ್ರ ಖಾಯಂ ಉದ್ಯೋಗಿಗಳಾಗಿದ್ದಾರೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ. ಮಹಾಮೈತ್ರಿಕೂಟದ ಒಂದು ಭಾಗವಾಗಿರುವ ಕಾಂಗ್ರೆಸ್, ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ, ಇತರ ಭರವಸೆಗಳ ಜೊತೆಗೆ, ಪ್ರತಿ ಮನೆಯ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಪ್ರತಿಜ್ಞೆ ಮಾಡಿದೆ.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)