ಬೆಂಗಳೂರು: ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿಯ ದಂಡೆ, ಸ್ನಾನಘಟ್ಟದಲ್ಲಿ ಅರ್ಧ ಬಳಸಿದ ಶ್ಯಾಂಪೋ, ಸೋಪು ಇತ್ಯಾದಿ ಎಸೆದು ಹೋಗುವುದನ್ನು ನಿರ್ಬಂಧಿಸುವ(Khandre issues notice to ban sale of soap, shampoo near river) ಮೂಲಕ ನದಿ ನೀರು ಮಲಿನವಾಗದಂತೆ ತಡೆಯಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮುಂದಾಗಿದ್ದಾರೆ.
ತತ್ಸಂಬಂಧ ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿಯ ಮೂಲಕ ಸೂಚನೆ ನೀಡಿರುವ ಅವರು, ಸ್ನಾನಘಟ್ಟಗಳಲ್ಲಿ ಭಕ್ತರು ಶ್ಯಾಂಪೋ, ಸೋಪು ಬಳಸಿ ಸ್ನಾನ ಮಾಡಿ ಉಳಿದ ತುಂಡು ಮತ್ತು ಶ್ಯಾಂಪೊ ಪ್ಯಾಕೆಟ್ ಬಿಟ್ಟು ಹೋಗುತ್ತಿದ್ದು, ಇದೆಲ್ಲ ನದಿ ಸೇರಿ ನೊರೆ ಉಕ್ಕುತ್ತಿದೆ. ನೀರು ಕಲುಷಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ, ಕೊಳ, ಸರೋವರದ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೊ ಮಾರಾಟ ಮಾಡದಂತೆ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಅದೇ ರೀತಿ ನದಿ, ಸರೋವರ, ಕೊಳ, ಕಲ್ಯಾಣಿಗಳಲ್ಲಿ ಭಕ್ತರು ತಾವು ಉಟ್ಟ ಬಟ್ಟೆಯನ್ನು ವಿಸರ್ಜಿಸದಂತೆ ನಿರ್ಬಂಧಿಸಲೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಒಂದರೆಡು ರೂ. ಮೌಲ್ಯದ ಶ್ಯಾಂಪೊ ಪೊಟ್ಟಣ, ಕಡಿಮೆ ಬೆಲೆಯ ಸಣ್ಣ ಸೋಪುಗಳು ನದಿ, ಸರೋವರ, ಕಲ್ಯಾಣಗಳ ಬಳಿಯೇ ಇರುವ ಅಂಗಡಿಗಳಲ್ಲಿ ಲಭಿಸುತ್ತಿದ್ದು, ಸುಲಭವಾಗಿ ಖರೀದಿಸುವ ಜನರು ಅದನ್ನು ಬಳಸಿ ಉಳಿದ ಸೋಪು, ಶ್ಯಾಂಪೊ ಸ್ಯಾಚೆಟ್ ಗಳನ್ನು ನೀರಿನಲ್ಲಿ ಅಥವಾ ದಂಡೆಯಲ್ಲಿ ಎಸೆದು ಹೋಗುತ್ತಿದ್ದು, ಇದು ನೀರಲ್ಲಿ ಬೆರೆತು ಜಲಚರಗಳು ಸಾವನ್ನಪ್ಪುತ್ತಿದ್ದರೆ, ಈ ನೀರು ಕುಡಿಯುವ ಜನ, ಜಾನುವಾರುಗಳು ಕಾಯಿಲೆಯಿಂದ ಬಳಸುವಂತಾಗಿದೆ. ಈ ನಿಟ್ಟಿನಲ್ಲಿ ನದಿಗಳ ಸಮೀಪ ಶ್ಯಾಂಪೊ, ಸೋಪು ಲಭ್ಯವಾಗದಂತೆ ತಡೆಯುವುದ ಅನಿವಾರ್ಯವಾಗಿದೆ.
ಇದರ ಜೊತೆಗೆ ಜನರು ಮೂಢ ನಂಬಿಕೆಯಿಂದ ನದಿಗಳಲ್ಲಿ ವಸ್ತ್ರಗಳನ್ನು ವಿಸರ್ಜನೆ ಮಾಡುತ್ತಿದ್ದು, ಕೆಲವು ತೀರ್ಥ ಕ್ಷೇತ್ರಗಳಲ್ಲಿ ರಾಶಿ ರಾಶಿ ವಸ್ತ್ರ ಬಿದ್ದಿರುವುದು ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರ ಸಚಿವ ಈ ಸೂಚನೆಯನ್ನು ಅನುಷ್ಠಾನಗೊಳಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಯವರು ಇತರ ಇಲಾಖೆಯ ನೆರವಿನಿಂದ ಕಡ್ಡಾಯಗೊಳಿಸಿದರೆ ನದಿ ಕೊಳ, ಸರೋವರದ ನೀರು ಕಲುಷಿತವಾಗುವುದನ್ನು ತಡೆಯಲು ಸಾಧ್ಯ.