Khan Sir: ಪಟನಾದ ಜನಪ್ರಿಯ ಶಿಕ್ಷಕ ಮತ್ತು ಖ್ಯಾತ ಯೂಟ್ಯೂಬರ್ ಖಾನ್ ಸರ್ 2025 ರ ರಕ್ಷಾ ಬಂಧನವನ್ನು ಅಸಾಧಾರಣ ರೀತಿಯಲ್ಲಿ ಆಚರಿಸಿದ್ದು, ನಡೆದ ಭವ್ಯ ಸಮಾರಂಭದಲ್ಲಿ ಸುಮಾರು 15,000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಖಾನ್ ಸರ್ ಕೈಗೆ ರಾಖಿ ಕಟ್ಟಿರುವ ವಿಡೀಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಟನಾದ ಎಸ್‌ಕೆ ಮೆಮೋರಿಯಲ್ ಹಾಲ್‌ನಲ್ಲಿ ಈ ಆಚರಣೆಯನ್ನು ಆಯೋಜಿಸಲಾಗಿತ್ತು, ಅಲ್ಲಿ ನೆರೆದಿದ್ದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಮನೆಯಿಂದ ದೂರವಿದ್ದವರು ಎನ್ನಲಾಗಿದೆ.
ಇದನ್ನೂ ಓದಿ:ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಅವಶ್ಯವಿದೆ
ಸುಲಭವಾಗಿ ವಿಷಯಗಳನ್ನು ತಿಳಿಸಿಕೊಡುವ ಬೋಧನಾ ವಿಧಾನಕ್ಕಾಗಿ ವ್ಯಾಪಕ ಮೆಚ್ಚುಗೆ ಪಡೆದಿರುವ ಖಾನ್, ವಿದ್ಯಾರ್ಥಿಗಳೊಂದಿಗಿನ ಭಾವನಾತ್ಮಕ ಸಂಪರ್ಕಕ್ಕೂ ಸಹ ಪ್ರೀತಿಪಾತ್ರರಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ವಿದ್ಯಾರ್ಥಿಗಳು ರಾಖಿ ಕಟ್ಟುವುದು ನನ್ನ ಅದೃಷ್ಟ. ನಾವು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ರಕ್ಷಿಸಬೇಕು. ರಕ್ಷಾ ಬಂಧನವು ಸಹೋದರ ಸಹೋದರಿಯರ ಹಬ್ಬವಾಗಿದೆ. ಮತ್ತು ಈ ದಾರವು ಬಂಧ ಮತ್ತು ವಾತ್ಸಲ್ಯವನ್ನು ಸೂಚಿಸುತ್ತದೆ ಎಂದಿರುವುದಾಗಿ ವರದಿಯಾಗಿದೆ.
ಆ ಸಂದರ್ಭದ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಖಾನ್ ಸರ್ ಅವರ ತೋಳುಗಳು ವರ್ಣರಂಜಿತ ರಾಖಿಗಳಿಂದ ತುಂಬಿರುವುದನ್ನು ಕಾಣಬಹುದಾಗಿದೆ. ಈ ಸಂದರ್ಭವನ್ನು ವಿಶೇಷವಾಗಿಸಲು ವಿವಿಧ ರಾಜ್ಯಗಳಿಂದ ಬಂದಿದ್ದ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರ ಮೇಲಿನ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.
ಖಾನ್ ಸರ್ ಈ ರೀತಿ ದೊಡ್ಡ ಪ್ರಮಾಣದಲ್ಲಿ ರಕ್ಷಾ ಬಂಧನ ಆಚರಿಸುತ್ತಿರುವುದು ಇದೇ ಮೊದಲಲ್ಲ. ಪ್ರತಿ ವರ್ಷ ಅವರು ಇದೇ ರೀತಿ ಆಯೋಜಿಸುತ್ತಾರೆ, ತಮ್ಮ ತರಬೇತಿ ಕೇಂದ್ರವನ್ನು ಶಿಕ್ಷಣಕ್ಕಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ಬಾಂಧವ್ಯ ಮತ್ತು ಭಾವನಾತ್ಮಕ ಬೆಂಬಲದ ಸ್ಥಳವಾಗಿ ಪರಿವರ್ತಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿನ ಭಾವನಾತ್ಮಕ ದೃಶ್ಯಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನೇಕ ಜನರು, ಖಾನ್ ಸರ್ ಅವರ ನಮ್ರತೆ ಮತ್ತು ವಿದ್ಯಾರ್ಥಿಗಳೊಂದಿಗೆ ಅವರು ಹಂಚಿಕೊಂಡ ಬಾಂಧವ್ಯದ ಆಳವನ್ನು ಮನಸಾರೆ ಹೊಗಳುತ್ತಿದ್ದಾರೆ.
ರಕ್ಷಾ ಬಂಧನಕ್ಕಾಗಿ ಬಂದವರಿಗೆ 156 ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)