Khalistani Terrorist: ಇತ್ತೀಚೆಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನಗಳಿಗೆ ಪದೇಪದೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಕಳೆದ ಶನಿವಾರ ಒಂದೇ ದಿನ ನಾನಾ ವಿಮಾನಯಾನ ಸಂಸ್ಥೆಗಳ 30ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆಯನ್ನು ಎದುರಿಸಿದವು. ಈ ಬೆಳವಣಿಗೆ ನಡುವೆಯೇ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾನೆ.
ವಿಡಿಯೋ ಬಿಡುಗಡೆ ಮಾಡಿರುವ ಗುರುಪತ್ವಂತ್ ಸಿಂಗ್ ಪನ್ನುನ್, ನವೆಂಬರ್ 1 ಮತ್ತು 19ರ ನಡುವೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬೇಡಿ ಎಂದಿದ್ದಾನೆ. ಭಾರತದಲ್ಲಿ ಸಿಖ್ ವಿರೋಧಿ ದಂಗೆಗಳ 40ನೇ ವಾರ್ಷಿಕೋತ್ಸವದಂದು ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾನೆ.
ಅಂದಹಾಗೆ ಪನ್ನುನ್ ಇಂತಹ ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ನವೆಂಬರ್‌ನಲ್ಲಿಯೂ ಇದೇ ರೀತಿಯ ವಿಡಿಯೋವನ್ನು ಬಿಡುಗಡೆ ಮಾಡಿದ್ದನು. ಕಳೆದ ವರ್ಷ ನವೆಂಬರ್ 19 ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಮತ್ತು ವಿಮಾನ ನಿಲ್ದಾಣದ ಹೆಸರನ್ನೂ ಬದಲಾಯಿಸಲಾಗುವುದು ಎಂದು ಹೇಳಿಕೆ ನೀಡಿದ್ದನು.
ಪಂಜಾಬ್ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2021ರ ಫೆಬ್ರವರಿ 3ರಂದು ಪನ್ನುನ್ ವಿರುದ್ಧ ಎನ್ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್ 29ರಂದು ಸರ್ಕಾರ ಘೋಷಣೆ ಮಾಡಿದೆ. ಭಾರತೀಯ ಮೂಲದ ಪನ್ನುನ್, ಯುಎಸ್ ಮತ್ತು ಕೆನಡಾದ ದ್ವಿಪೌರತ್ವವನ್ನು ಹೊಂದಿದ್ದಾನೆ.
ಇನ್ನೂ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬರುವ ಕಳವಳಕಾರಿ ವಿದ್ಯಮಾನ ಮುಂದುವರಿದಿದ್ದು ಕಳೆದ ಶನಿವಾರ ಒಂದೇ ದಿನ ನಾನಾ ವಿಮಾನಯಾನ ಸಂಸ್ಥೆಗಳ 30ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆಯನ್ನು ಎದುರಿಸಿದವು. ಈ ಹುಸಿ ಕರೆಗಳಿಂದಾಗಿ ಸಂಚಾರದಲ್ಲಿ ವ್ಯತ್ಯಯವಾಯಿತು. ಶನಿವಾರದ ಪ್ರಕರಣ ನಂತರ ವಾರದಲ್ಲಿ ದಾಖಲಾದ ಇಂಥ ಪ್ರಕರಣಗಳ ಸಂಖ್ಯೆ 70ಕ್ಕೆ ಏರಿದಂತಾಗಿದೆ. ಬಾಂಬ್ ಬೆದರಿಕೆ ಕರೆಗಳ ಕಾರಣದಿಂದ ಭದ್ರತಾ ವ್ಯವಸ್ಥೆ ವಿಚಾರದಲ್ಲಿ ಕಳವಳ ಉಂಟಾಗಿದೆ. ದೇಶೀಯ ಏರ್ಲೈನ್ಸ್ಗಳ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳ 30ಕ್ಕೂ ಅಧಿಕ ವಿಮಾನಗಳಿಗೆ ಶನಿವಾರ ಬಾಂಬ್ ಬೆದರಿಕೆ ಎದುರಾಯಿತು ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಿಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕರೆಗಳು ಹರಿದು ಬಂದವು. ಕನಿಷ್ಠ ಒಂದು ವಿಮಾನದ ಶೌಚಗೃಹದಲ್ಲಿ ಒಂದು ನೋಟ್ ಸಿಕ್ಕಿದ್ದು ವಿಮಾನದಲ್ಲಿ ಬಾಂಬ್ ಇದೆ ಎಂದು ಅದರಲ್ಲಿ ಬರೆಯಲಾಗಿತ್ತು.
ಕಳೆದ ಶುಕ್ರವಾರ, ದೆಹಲಿಯಿಂದ ಲಂಡನ್ಗೆ ತೆರಳುತ್ತಿದ್ದ ವಿಸ್ತಾರಾ ವಿಮಾನಕ್ಕೆ ಸ್ಫೋಟ ಬೆದರಿಕೆ ಬಂದ ಕಾರಣ ಅದನ್ನು ಜರ್ಮನಿಯ ಫ್ರಾಂಕ್ಫರ್ಟ್ಗೆ ಡೈವರ್ಟ್ ಮಾಡಲಾಗಿತ್ತು. ನಂತರ ಅದು ಲಂಡನ್ಗೆ ಹೊರಟಿತು. ದುಬೈ-ಜೈಪುರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ, ಬಾಂಬ್ ಬೆದರಿಕೆಯಿಂದಾಗಿ ವಿಳಂಬವಾಗಿ ಹೊರಟಿತು. ಜೈಪುರದಿಂದ ಬೆಳಿಗ್ಗೆ 6.10ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನ, ಸಮಗ್ರ ಭದ್ರತಾ ಪರಿಶೀಲನೆ ನಂತರ ಬೆಳಿಗ್ಗೆ 7.45ಕ್ಕೆ ದುಬೈಗೆ ಹೊರಟಿತು.
ಪ್ರತಿ ಕರೆಗೆ 3 ಕೋಟಿ ರೂ. ನಷ್ಟ: ವಿಮಾನಗಳಿಗೆ ಬರುವ ಹುಸಿ ಬಾಂಬ್ ಕರೆಗಳು ಕೇವಲ ಭದ್ರತಾ ಕಳವಳದ ವಿಷಯವಾಗಿ ಉಳಿದಿಲ್ಲ. ಅವು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತವೆ. ವಿಮಾನಗಳಿಗೆ ಬರುವ ಇಂಥ ಪ್ರತಿ ಕರೆಯಿಂದಾಗಿ ಸಂಬಂಧಪಟ್ಟ ಏರ್ಲೈನ್ಸ್ಗಳಿಗೆ ಸರಾಸರಿ ಸುಮಾರು 3 ಕೋಟಿ ರೂ.ನಷ್ಟ ಸಂಭವಿಸುತ್ತದೆ. (ಏಜೆನ್ಸೀಸ್)