ನ್ಯೂಸ್

ಕಾಶ್ಮೀರಿ ಗೇಟ್ ಬಳಿ ಖಲಿಸ್ತಾನ್ ಪರ ಘೋಷಣೆ ಬರೆದಿದ್ದಕ್ಕಾಗಿ ಎಫ್‌ಐಆರ್ ದಾಖಲು; ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ

ನವದೆಹಲಿ: ರಾಜಧಾನಿ ದೆಹಲಿಯ ಕಾಶ್ಮೀರಿ ಗೇಟ್ ಬಳಿಯ ಫ್ಲೈಓವರ್ ಮೇಲೆ ಖಲಿಸ್ತಾನಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಬರೆಯಲಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಫ್ಲೈಓವರ್ ಮೇಲೆ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಬಣ್ಣ ಎರಚುವ ಮೂಲಕ ಘೋಷಣೆಗಳನ್ನು ಅಳಿಸಿ ಹಾಕಿದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡ ಶಂಕಿತರು
ಕೆಲವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಎರಡು-ಮೂರು ಶಂಕಿತರು ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದೃಶ್ಯಗಳಲ್ಲಿ ಕಾರಿನ ಸಂಖ್ಯೆ ಸ್ಪಷ್ಟವಾಗಿ ಕಾಣಿಸದಿದ್ದರೂ ಅವರು ಕಾರಿನಲ್ಲಿ ಬಂದಿದ್ದರು. ಸದ್ಯ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.

ರಾಜಧಾನಿಯಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಇಂತಹ ಘಟನೆಗಳು ನಡೆದಿವೆ. ಇದಕ್ಕೂ ಮುನ್ನ ಆಗಸ್ಟ್ ಕೊನೆಯ ವಾರದಲ್ಲಿಯೂ ದೆಹಲಿಯ ಐದಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿತ್ತು.