ನ್ಯೂಸ್

5 ಕೋಟಿ ಹಳೇ ನೋಟಿಗೆ ಬೆಂಕಿ ಇಡಲು ಮುಂದಾದ ಖಾಕಿ

ಮಂಜುನಾಥ.ಕೆ

ಬೆಂಗಳೂರು: 5 ಕೋಟಿ ಮೌಲ್ಯದ ಹಳೇ ನೋಟುಗಳನ್ನು ನಾಶಪಡಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಹಲವು ಪ್ರಕರಣಗಳಲ್ಲಿ ಪೊಲೀಸರು ೫ ಕೋಟಿಗೂ ಹೆಚ್ಚು ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಈ ಹಳೇ ನೋಟುಗಳನ್ನು ಆರ್‌ಬಿಐಗೆ ನೀಡಿ ಬದಲಾವಣೆಗೆ ಮುಂದಾಗಿದ್ದು ಆರ್‌ಬಿಐ ಕೂಡ ಹಳೇ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಈ ಹಿನ್ನೆಲೆ ಇದೀಗ ಹಳೇ ನೋಟುಗಳಿಗೆ ಬೆಂಕಿ ಇಡಲು ಪೊಲೀಸರು ತೀರ್ಮಾನಿಸಿದ್ದು ಕೋರ್ಟ್ ಮೊರೆ ಹೋಗಿದ್ದಾರೆ.
ಆರ್‌ಬಿಐ ನಿರಾಕರಿಸಿದ್ದೇಕೆ?
ಪೊಲೀಸರ ಬಳಿ ಐದು ಕೋಟಿಗೂ ಅಧಿಕ ಹಳೆಯ ನೋಟಿನ ಕಂತೆಗಳಿವೆ. ೧೦೦೦ ಹಾಗೂ ೫೦೦ ಮುಖಬೆಲೆಯ ಹಳೇ ನೋಟುಗಳಿಗೆ ನಯಾಪೈಸೆ ಬೆಲೆ ಇಲ್ಲ. ಆ ನೋಟುಗಳೀಗ ಕೇವಲ ಕಾಗದದ ಚೂರಷ್ಟೇ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ.
ಬೆಂಗಳೂರಿನ ಹಲವು ಪ್ರಕರಣದಲ್ಲಿ ೫ ಕೋಟಿಗೂ ಅಧಿಕ ಹಳೆಯ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಬೇರೆ ಬೇರೆ ಪ್ರಕರಣದಲ್ಲಿ ಹಳೇ ನೋಟುಗಳು ಪತ್ತೆಯಾಗಿವೆ. ನೋಟು ಅಮಾನ್ಯೀಕರಣ ಬಳಿಕ ಹಳೇ ನೋಟುಗಳು ಬೆಲೆ ಕಳೆದುಕೊಂಡಿವೆ. ನೋಟು ಅಮಾನ್ಯೀಕರಣ ಬಳಿಕ ಬದಲಾವಣೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಕೊಟ್ಟ ಕಾಲಾವಕಾಶ ಕೂಡ ಮುಗಿದು ಹೋಗಿದೆ. ಹೀಗಾಗಿ ಹಳೇ ನೋಟುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ಹಳೇ ನೋಟು ಹಿನ್ನೆಲೆ ಪೊಲೀಸರು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡುವುದಕ್ಕೂ ಆಗುತ್ತಿಲ್ಲ. ಅತ್ತ ಆರ್‌ಬಿಐ ಕೂಡ ಈ ಹಣವನ್ನ ಸ್ವೀಕಾರ ಮಾಡುತ್ತಿಲ್ಲ. ಹೀಗಾಗಿಯೇ ಹಳೇ ನೋಟುಗಳನ್ನ ಸುಟ್ಟು ಹಾಕಲು ಪೊಲೀಸರು ನಿರ್ಧರಿಸಿದ್ದಾರೆ. ಕೋರ್ಟ್ ಅನುಮತಿ ಪಡೆದ ಬಳಿಕ ಪೊಲೀಸರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೋರ್ಟ್ ಅನುಮತಿ ಕೊಟ್ಟರೆ ಪೊಲೀಸರು ಹಳೇ ನೋಟು ನಾಶಪಡಿಸಲಿದ್ದಾರೆ.