ಬೆಂಗಳೂರು: ತುರ್ತು ಪರಿಸ್ಥಿತಿ ಸಮಯದಲ್ಲಿ ದೇಶದಲ್ಲಿ ಗೋಯಾಂಕ ಅವರಿಗೆ ದೊಡ್ಡ ಹೆಸರಿದ್ದರೆ, ಕರ್ನಾಟಕದಲ್ಲಿ ಖಾದ್ರಿ ಶಾಮಣ್ಣ ಬಹಳ ಪ್ರಭಾವಶಾಲಿಯಾಗಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ಸಿಡಿದೆದ್ದಿದ್ದರು ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶೇಷಾದ್ರಿಪುರ ಕಾಲೇಜಿನಲ್ಲಿ ಶನಿವಾರ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ವತಿಯಿಂದ ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರಿಗೆ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಜಾಗೃತರಾಗಿರುವುದು ಎಷ್ಟು ಮುಖ್ಯವೋ ಜನಪರವಾಗಿ ಕೆಲಸ ಮಾಡುವುದು ಕೂಡ ಅಷ್ಟೇ ಮುಖ್ಯ. ಪತ್ರಿಕೋದ್ಯಮದ ಪ್ರಭಾವಶಾಲಿ ಮಾಧ್ಯಮವಾಗಿರುವ ಕಾರಣ ಹೊಸ ಚಿಂತನೆಗಳನ್ನು ಮೂಡಿಸುವ ಕೆಲಸವನ್ನು ಮಾಡನೇಕಿದೆ. ಖಾದ್ರಿ ಶಾಮಣ್ಣ ಬದುಕಿದ್ದಾಗ ಮುಂದೆ ಬರುವ ಸರ್ಕಾರಗಳು ಅವರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿದರು.
ಪತ್ರಿಕೋದ್ಯಮ ಬಹಳ ಕ್ಲೀಷ್ಟವಾಗಿರುತ್ತದೆ. ಕೆಲವು ಸಾರಿ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾದಾಗ ಸತ್ಯದ ಮೇಲೆ ನಿಲುವು ತೆಗೆದುಕೊಂಡರೆ ಅದಕ್ಕೆ ಮಹತ್ವ ಬರುತ್ತದೆ. ಕೆಲವು ಸಾರಿ ತಾವು ತೆಗೆದುಕೊಂಡ ನಿಲುವಿನ ವಿರುದ್ಸ ತೆಗೆದುಕೊಳ್ಳುವ ಸಂದರ್ಭ ಬರಬಹುದು ಆಗ ಸ್ಪಷ್ಟ, ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಖಾದ್ರಿ ಶಾಮಣ್ಣ ಅಂತಹ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಗಾಂಧಿ ಭವನದ ಅಧ್ಯಕ್ಷರಾದ ವೂಡೇ ಪಿ. ಕೃಷ್ಣ, ಆಸ್ಸಾಂ ಕೇಂದ್ರಿಯ ವಿವಿ ನಿವೃತ್ತ ಸಮ ಕುಲಪತಿ ಪ್ರೊ. ಕೆ.ವಿ. ನಾಗರಾಜ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಮತ್ತು ಖಾದ್ತಿ ಶಾಮಣ್ಣ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಚ್.ಆರ್. ಶ್ರೀಶ ಉಪಸ್ಥಿತರಿದ್ದರು.
ಪ್ರಶಸ್ತಿಗೆ ಕೂಡ್ಲಿ ಅರ್ಹ
ಖಾದ್ರಿ ಶಾಮಣ್ಣ ಗರಡಿಯಲ್ಲಿ ಕೂಡ್ಲಿ ಗುರುರಾಜ್ ಬೆಳೆದಿದ್ದಾರೆ. ಹುಬ್ಬಳ್ಳಿಯಲ್ಲಿ ಕನ್ನಡ ಪ್ರಭದಲ್ಲಿ ಇವರು ಇದ್ದಾಗ ಅವರ ಲೇಖನಗಳನ್ನು ಓದಿದ್ದೆ. ಬಳಿಕ ಅವರು ಪರಿಚಯವಾಗಿ ಸ್ನೇಹವಾಗಿ ಬೆಳೆದಿದೆ. ಗುರುರಾಜ್ ಅವರು ಉತ್ತರ ಕರ್ನಾಟಕದ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಯೋಗ್ಯ ಪ್ರಶಸ್ತಿ ದೊರೆತಿದೆ. ನನ್ನಿಂದ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿರುವುದು ನನ್ನ ಮನದಲ್ಲಿ ಯಾವಾಗಲೂ ಉಳಿಯುತ್ತದೆ ಎಂದು ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದರು.
ಪತ್ರಕರ್ತ ಅಪ್‌ಡೇಟ್ ಆಗ್ದಿದ್ರೆ ಓಟ್‌ಡೇಟೆಡ್: ಕೂಡ್ಲಿ
ಖಾದ್ರಿ ಶಾಮಣ್ಣ ಜನ್ಮ ಶತಮಾನೋತ್ಸವ ವರ್ಷಾಚರಣೆಯಲ್ಲಿಯೇ ನನತೆ ಪ್ರಶಸ್ತಿ ದೊರೆತಿರುವುದು ತುಂಬಾ ಸಂತಸ ತಂದಿದೆ ಎಂದು ಕೂಡ್ಲಿ ಗುರುರಾಜ ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಹೈಸ್ಕೂಲ್‌ನಲ್ಲಿ ಓದುತ್ತಿದ್ದ ದಿನಗಳಲ್ಲಿ ಪತ್ರಕರ್ತರ ಹೆಸರಲ್ಲಿ ಮೊದಲು ಕಿವಿಗೆ ಬಿದ್ದಿದ್ದೇ ಖಾದ್ರಿ ಶಾಮಣ್ಣ ಅವರು. ನಂತರ 1988ರಲ್ಲಿ ಕೆಲಸ ಕೇಳಿಕೊಂಡು ಕನ್ನಡ ಪ್ರಭ ಕಚೇರಿಗೆ ಹೋಗಿ ಭೇಟಿಯಾಗಿದ್ದೆ ಎಂದು ನೆನಪುಗಳನ್ನು ಹಂಚಿಕೊಂಡರು.
ಎಐ ಕಾಲದಲ್ಲಿ ಪತ್ರಕರ್ತರು ಈಗ ಪ್ರತಿ ದಿನ ಅಪ್‌ಡೇಟ್ ಆಗಬೇಕು. ಇಲ್ಲವಾದಲ್ಲಿ ಔಟ್‌ಡೇಟೆಡ್ ಆಗ್ತಾರೆ ಎಂದರು.
ಇದೇ ವೇಳೆ ತಮಗೆ ಜೀನವದ ಉದ್ದಕ್ಕೂ ಕೆಲಸ ಹೇಳಿಕೊಟ್ಟು ಮಾರ್ಗದರ್ಶನ ನೀಡಿದ ಸಂಯುಕ್ತ ಕರ್ನಾಟಕದ ಕೆ. ಶಾಮರಾವ್, ವೈಎನ್‌ಕೆ, ಇ-ರಾಘವನ್ ಸೇರಿ ಹಲವರನ್ನು ಸ್ಮರಿಸಿದರು.