ನ್ಯೂಸ್

ಒಂದೇ ಒಂದು ವಿಡಿಯೋಗಾಗಿ ಕಿತ್ತಾಡಿದ ದಂಪತಿ: ಮುಂದಾಗಿದ್ದು ಘನ ಘೋರ ದುರಂತ!

ತಿರುವನಂತಪುರಂ: ಲಿವ್ ಇನ್  ರಿಲೇಶನ್​ನಲ್ಲಿದ್ದ ಮಹಿಳೆ ತನ್ನ ಜತೆಗಾರ ಹಚ್ಚಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಮೃತಳನ್ನು 28 ವರ್ಷದ ಅಥಿರಾ ಎಂದು ಗುರುತಿಸಲಾಗಿದೆ. ಈಕೆ ಶಾನವಾಸ್​ ಎಂಬಾತನ ಜತೆ ಲಿವ್ ಇನ್ ರಿಲೇಶನ್​ನಲ್ಲಿದ್ದಳು. ಅಥಿರಾ ಸೆರೆಹಿಡಿದಿದ್ದ ಹಾಗೂ ಜೂನ್​ 8ರಂದು ಅಪ್​ಲೋಡ್​ ಮಾಡಲು ಬಯಸಿದ್ದ ವಿಡಿಯೋವೊಂದರ ಕುರಿತು ಇಬ್ಬರ ನಡುವೆ ಜಗಳ ನಡೆದಿತ್ತು.

ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಕೋಪದ ಕೈಗೆ ಬುದ್ಧಿ ಕೊಟ್ಟ ಶಾನವಾಸ್​, ಅಥಿರಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಶೇ. 40 ರಷ್ಟು ಸುಟ್ಟ ಗಾಯಗಳಿಂದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಥಿರಾ ಮತ್ತು ಶಾನವಾಸ್​ಗೆ 6 ತಿಂಗಳ ಮಗುವಿದೆ. ಘಟನೆ ನಡೆದಾಗ ಮಗು ಮನೆಯಲ್ಲಿಯೇ ಇತ್ತು. ದಂಪತಿ ಕಳೆದ ಎರಡು ವರ್ಷದಿಂದ ಕೊಲ್ಲಂ ಜಿಲ್ಲೆಯ ಅಂಚಲ್​ ತಾಲೂಕಿನ ಕೈಪಲ್ಲಿಮುಕ್ಕುವಿನಲ್ಲಿ ನೆಲೆಸಿದ್ದರು. ಘಟನೆ ನಡೆದ ಬೆನ್ನಲ್ಲೇ ಮೊದಲು ಅಥಿರಾಳನ್ನು ಅಂಚಲ್​ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆ ತಿರುವನಂತಪುರಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಕಿತ್ಸೆ ನಡೆಯುವಾಗಲೇ ಆಕೆಯನ್ನು ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆಯುವಾಗ ಶಾನವಾಸ್​ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಎಂದು ಹೇಳಿದ್ದಾಳೆ. ಅದೇ ಆಸ್ಪತ್ರೆಯಲ್ಲಿ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಥಿರಾ ಹೇಳಿಕೆ ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)