ವಯನಾಡು: ಭಾರಿ ಮಳೆಗೆ ಸಂಭವಿಸಿದ ಭೂಕುಸಿತದಿಂದಾಗಿ ಸುಮಾರು 8 ಮಂದಿ ದುರಂತ ಸಾವಿಗೀಡಾಗಿ, 100ಕ್ಕೂ ಅಧಿಕ ಮಂದಿ ಸಿಲುಕಿಕೊಂಡಿರುವ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮತ್ತಷ್ಟು ಭೂಕುಸಿತ ಹಾಗೂ ಪ್ರವಾವ ಭೀತಿ ಎದುರಾಗಿದೆ.
ಭೂಕುಸಿತದಿಂದಾಗಿ ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದು, ರಾಜ್ಯ ಮತ್ತು ರಾಷ್ಟ್ರದ ರಕ್ಷಣಾ ಪಡೆಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ವಯನಾಡು, ಇಡುಕ್ಕಿ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಭೂಕುಸಿತದ ವರದಿಯಾಗಿದೆ.
ವಯನಾಡಿನಲ್ಲಿ ಮುಂಡಕ್ಕಯ್ಯಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಅಟ್ಟಮಾಲ ಮತ್ತು ಮುಂಡಕ್ಕಯ್ಯಿಲ್ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಉಳಿದ ಭಾಗಗಳ ಸಂಪರ್ಕ ಕಡಿತಗೊಂಡಿವೆ. ಪಾಲಕ್ಕಾಡ್‌ನಲ್ಲಿ ಗುಡ್ಡಗಾಡು ಪ್ರದೇಶದ ಮೂರು ಸ್ಥಳಗಳಲ್ಲಿ ಮಂಗಳಂ ಅಣೆಕಟ್ಟು ಕುಸಿದಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಸ್ಥಳೀಯ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
ವರದಿಗಳ ಪ್ರಕಾರ ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕಯ್ಯಿಲ್ ಪಟ್ಟಣದಲ್ಲಿ ಭಾರಿ ಮಳೆ ಸುರಿದ ಪರಿಣಾಮ ತಡರಾತ್ರಿ 1 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದೆ. ಪ್ರಸ್ತುತ ಉಪಗ್ರಹ ಮತ್ತು ರಾಡಾರ್ ಸೂಚನೆಗಳ ಪ್ರಕಾರ, ಕೇರಳದಲ್ಲಿ ಮುಂದಿನ 24 ಗಂಟೆಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲಲ್ಲಿ ಭೂಕುಸಿತ ಪ್ರಕರಣಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಲು ಸ್ಥಳೀಯ ಆಡಳಿತ ಸೂಚನೆ ನೀಡಿದೆ.
ವಯನಾಡು ಜಿಲ್ಲೆಯಲ್ಲಿ ಮಳೆ ಮತ್ತು ಭೂಕುಸಿತಕ್ಕೆ ಪ್ರತಿಕ್ರಿಯೆಯಾಗಿ, ಆರೋಗ್ಯ ಇಲಾಖೆ-ರಾಷ್ಟ್ರೀಯ ಆರೋಗ್ಯ ಮಿಷನ್, ನಿಯಂತ್ರಣ ಕೊಠಡಿಯನ್ನು ತೆರೆದಿದ್ದು, ತುರ್ತು ಸಹಾಯಕ್ಕಾಗಿ, 9656938689 ಅಥವಾ 8086010833 ಗೆ ಕರೆ ಮಾಡಲು ಸೂಚಿಸಿದೆ. (ಏಜೆನ್ಸೀಸ್)