ತಿರುವನಂತಪುರ: ಕರೊನಾ ಸೋಂಕಿನ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳ ಇದೀಗ ಸೋಂಕು ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಈ ರಾಜ್ಯದಲ್ಲಿ ಈಗ ಪ್ರತಿದಿನ ಸೋಂಕು ಪತ್ತೆಯಾಗುತ್ತಿರುವವರ ಸಂಖ್ಯೆ ಒಂದಂಕಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ನಿಯಮವನ್ನು ಹಂತಹಂತವಾಗಿ ಸಡಿಲಗೊಳಿಸಲು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮುಂದಾಗಿದೆ.
ರಾಜ್ಯವನ್ನು ಕೆಂಪು, ಕಿತ್ತಳೆ ಎ, ಕಿತ್ತಳೆ ಬಿ ಮತ್ತು ಹಸಿರು ಎಂದು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯದಲ್ಲಿ ಬರುವ ಕಾಸರಗೋಡು, ಕಣ್ಣೂರು, ಕೋಳಿಕ್ಕೋಡ್ ಮತ್ತು ಮಲ್ಲಾಪುರಂನಲ್ಲಿ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ. ಇಲ್ಲಿನ ಸೀಲ್ಡೌನ್ ಆದ ಪ್ರದೇಶಗಳಲ್ಲಿ ಜನ, ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅಗತ್ಯವಸ್ತುಗಳ ಸರಬರಾಜಿಗಾಗಿ ಕೇವಲ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿರಲಿವೆ.
ಇನ್ನುಳಿದ ಪ್ರದೇಶಗಳಲ್ಲಿ ಆಯಾ ವರ್ಗೀಕರಣವನ್ನು ಆಧರಿಸಿ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ.
ನಾನ್ಹಾಟ್ಸ್ಪಾಟ್ ಎನಿಸಿಕೊಂಡಿರುವ ಈ ಪ್ರದೇಶಗಳಲ್ಲಿ ರಾತ್ರಿ 7 ಗಂಟೆಯವರೆಗೆ ಹೋಟೆಲ್ನಲ್ಲಿ ತಿಂಡಿ, ಭೋಜನ ಮಾಡಲು ಅವಕಾಶ ನೀಡಲಾಗುತ್ತಿದೆ. ಸರಿ ಮತ್ತು ಬೆಸ ಸಂಖ್ಯೆಯನ್ನು ಆಧರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಜಿಲ್ಲೆಯ ಒಳಭಾಗದಲ್ಲಿ ಸಮೀಪದ ಊರುಗಳಿಗೆ ಬಸ್ಗಳ ಸಂಚಾರ ಆರಂಭಿಸಲಾಗುತ್ತಿದೆ. ಆದರೂ ಬಸ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕಿತ್ತಳೆ ಬಿ ವಲಯದಲ್ಲಿ ಇರುವ ಅಲ್ಲಪ್ಪುಳ, ತ್ರಿವೇಂಡ್ರಂ, ಪಾಲಕ್ಕಾಡ್, ವಯನಾಡ್ ಮತ್ತು ತ್ರಿಷೂರ್ನಲ್ಲಿ ಈ ಸಡಿಲಿಕೆಗಳು ಏಪ್ರಿಲ್ 20ರಿಂದ ಜಾರಿಗೆ ಬರಲಿವೆ.
ಕಿತ್ತಳೆ ಎ ವಲಯದಲ್ಲಿರುವ ಪಟ್ಟಣಂತಿಟ್ಟಾ, ಎನ್ರಾಕುಲಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಈ ಸಡಿಲಿಕೆ ಏಪ್ರಿಲ್ 24ರಿಂದ ಜಾರಿಗೊಳ್ಳಲಿದೆ.
ಹಸಿರು ವಲಯದಲ್ಲಿರುವ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸೋಮವಾರದಿಂದಲೇ ಜನಜೀವನ ಸಾಮಾನ್ಯಗೊಳ್ಳಲಿದೆ.