ನವದೆಹಲಿ: ದೇಶಕ್ಕೆ ಈ ಸಲ ನೈಋತ್ಯ ಮುಂಗಾರು ಪ್ರವೇಶ ವಿಳಂಬವಾಗಲಿದೆ. ಮಳೆ ಆಧಾರಿತ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಮಳೆಗಾಲದ ಆಗಮನ ವಿಳಂಬವಾದರೆ ಬೇಸಿಗೆ ಬಿಸಿಲಿನ ತೀವ್ರತೆಯನ್ನು ಅಷ್ಟು ದಿನ ಸಹಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕೇರಳದ ಮೂಲಕ ಪ್ರವೇಶಿಸುವ ನೈಋತ್ಯ ಮುಂಗಾರು ಈ ಸಲ ಸಾಮಾನ್ಯಕ್ಕಿಂತ ಕನಿಷ್ಠ ನಾಲ್ಕು ದಿನ ವಿಳಂಬವಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
ಸದ್ಯದ ಮುನ್ನೋಟ ಪ್ರಕಾರ ಕೇರಳಕ್ಕೆ ಮುಂಗಾರು ನಾಲ್ಕು ದಿನ ತಡವಾಗಿ ಅಂದರೆ ಜೂನ್ 5ರಂದು ಪ್ರವೇಶಿಸಲಿದೆ. ಮುಂದೆ ನಾಲ್ಕು ತಿಂಗಳು ಈ ರಾಜ್ಯದಲ್ಲಿ ಮಳೆಯಾಗಲಿದೆ. ಉಳಿದೆಡೆ ಆಯಾ ರಾಜ್ಯದ ಭೌಗೋಳಿಕ ವಾತಾವರಣಕ್ಕೆ ಅನುಗುಣವಾಗಿ ವ್ಯತ್ಯಯವಾಗಲಿದೆ. ಈ ಮುನ್ನೋಟದ ಅಂದಾಜಿನಲ್ಲಿ ಶೇಕಡ 5ರಷ್ಟು ಮಾತ್ರವೇ ಏರುಪೇರಾಗುವ ಸಾಧ್ಯತೆ ಇರುವಂಥದ್ದು ಎಂದೂ ಹವಾಮಾನ ಇಲಾಖೆ ತಿಳಿಸಿದೆ..
ಕಳೆದ ಐದು ವರ್ಷಗಳ ಅವಧಿಯಲ್ಲಿ ಹವಾಮಾನ ಇಲಾಖೆ ಅಂದಾಜಿಸಿದ ಪ್ರಕಾರವೇ ಹೆಚ್ಚುಕಡಿಮೆ ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶಿಸಿದೆ. 2015ರಲ್ಲಿ ಮೇ 30ಕ್ಕೆ ಮುಂಗಾರುಪ್ರವೇಶ ಅಂದಾಜಿಸಿದ್ದರೂ, ಜೂನ್ 5ಕ್ಕೆ ಮಳೆ ಆರಂಭವಾಗಿತ್ತು. 2016ರಲ್ಲಿ ಜೂನ್ 7ಕ್ಕೆ ಅಂದಾಜಿಸಿದ್ದರೆ ಜೂ.8ಕ್ಕೂ, 2017ರಲ್ಲಿ ಮೇ 30ಕ್ಕೆ ಅಂದಾಜಿಸಿದ್ದು ಅದೇ ದಿನ, 2019ರಲ್ಲಿ ಜೂನ್ 6ಕ್ಕೆ ಅಂದಾಜಿಸಿದ್ದು ಜೂನ್ 8ಕ್ಕೆ ಮಳೆಗಾಲ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್)