ನ್ಯೂಸ್

'ದ ಕೇರಳ ಸ್ಟೋರಿ' ಹರಿಯಾಣದಲ್ಲಿ ತೆರಿಗೆ ಮುಕ್ತ!

ನವದೆಹಲಿ: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬುಧವಾರ ಚಲನಚಿತ್ರವನ್ನು ತಮ್ಮ ರಾಜ್ಯದಕ್ಕು ತೆರಿಗೆ ಮುಕ್ತಗೊಳಿಸಿದ್ದಾರೆ . "ದ ಕೇರಳ ಸ್ಟೋರಿ"ಯನ್ನು ಹರಿಯಾಣದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ...," ಎಂದು ಅವರು ಬುಧವಾರ ಸಂಜೆ ಟ್ವೀಟ್ ಮಾಡಿದರು. ಆದರೆ ನಂತರ ಅದನ್ನು ಅಳಿಸಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಂತಹ ಬಿಜೆಪಿ ಆಡಳಿತದ ವಿವಿಧ ರಾಜ್ಯಗಳಲ್ಲಿ 'ದ ಕೇರಳ ಸ್ಟೋರಿ' ತೆರಿಗೆ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ.

ಏತನ್ಮಧ್ಯೆ, ಚಿತ್ರದ ನಾಯಕಿ ಅದಾ ಶರ್ಮಾ ಅವರು ಶುಕ್ರವಾರ (ಮೇ 12) 37 ದೇಶಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ನಟಿ ಪ್ರೇಕ್ಷಕರು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಚಲನಚಿತ್ರವನ್ನು ಟ್ರೆಂಡ್ ಮಾಡಲು ಮತ್ತು ತನ್ನ ಅಭಿನಯದ ಮೇಲೆ ಪ್ರೀತಿಯನ್ನು ಧಾರೆಯೆರೆದಿದ್ದಕ್ಕಾಗಿ ತನ್ನ ಅಭಿಮಾನಿಗಳಿಗೆ ಕೃತಜ್ಞಳಾಗಿದ್ದೇನೆ ಎಂದು ಅವರು ಹೇಳಿದರು.

"ನಮ್ಮ ಚಿತ್ರವನ್ನು ವೀಕ್ಷಿಸಲು ಹೊರಟಿರುವ ನಿಮಗೆಲ್ಲ ಧನ್ಯವಾದಗಳು, ಚಿತ್ರವನ್ನು ಟ್ರೆಂಡ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಅಭಿನಯವನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಈ ವಾರಾಂತ್ಯದಲ್ಲಿ 'ದಿ ಕೇರಳ ಸ್ಟೋರಿ' ಅಂತರಾಷ್ಟ್ರೀಯ ಮಟ್ಟದಲ್ಲಿ 37 ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ." ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸುದೀಪ್ತೋ ಸೇನ್ ನಿರ್ದೇಶಿಸಿದ ಮತ್ತು ವಿಪುಲ್ ಶಾ ನಿರ್ಮಿಸಿದ ಈ ಚಲನಚಿತ್ರವು ಕೇರಳದ ಮಹಿಳೆಯರು ಇಸ್ಲಾಂಗೆ ಮತಾಂತರಗೊಳ್ಳಲು ಹೇಗೆ ಒತ್ತಾಯಿಸಲ್ಪಟ್ಟರು ಮತ್ತು ನಂತರ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (IS) ನಿಂದ ಹೇಗೆ ನೇಮಕಗೊಳ್ಳುತ್ತಾರೆ ಎಂಬುದನ್ನು ಚಿತ್ರಿಸುತ್ತದೆ.

ಕಳೆದ ವಾರ ಬಿಡುಗಡೆಯಾದ ಈ ಚಿತ್ರ ವಿವಾದದ ಕೇಂದ್ರಬಿಂದುವಾಗಿದೆ. ಬಿಜೆಪಿ ನಾಯಕರು ಚಿತ್ರಕ್ಕೆ ಬೆಂಬಲ ನೀಡಿದ್ದು, ಇತರ ರಾಜ್ಯಗಳು ಇದನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ 'ಶಾಂತಿ ಕಾಪಾಡಲು' ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಚಿತ್ರದ ಮೇಲೆ ನಿಷೇಧ ಹೇರಿದೆ. ತಮಿಳುನಾಡಿನ ಮಲ್ಟಿಪ್ಲೆಕ್ಸ್​ಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ವಿವಾದಾತ್ಮಕ ಚಿತ್ರದ ಪ್ರದರ್ಶನವನ್ನು ನಿಲ್ಲಿಸಿದವು. ಮೇ 5ರಂದು ಬಿಡುಗಡೆಯಾದ 'ದಿ ಕೇರಳ ಸ್ಟೋರಿ' ಬಾಕ್ಸ್ ಆಫೀಸ್‌ನಲ್ಲಿ 56 ಕೋಟಿ ರೂ. ಗಳಿಸಿದೆ.(ಏಜೆನ್ಸೀಸ್)