ತಿರುವನಂತಪುರಂ: ಕಳೆದ ವಾರ ಕಣ್ಣೂರು ಜಿಲ್ಲೆಯ ಉದ್ಯಮಿಯೊಬ್ಬರ ಮನೆಯಿಂದ 1 ಕೋಟಿ ರೂಪಾಯಿ ಮತ್ತು 300 ಚಿನ್ನದ ನಾಣ್ಯಗಳನ್ನು ಕಳವು ಮಾಡಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು( Police) ದೂರುದಾರರ ನೆರೆಹೊರೆಯವರನ್ನ ಸೋಮವಾರ (ಡಿಸೆಂಬರ್ 2) ಬಂಧಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ರಚಿಸಲಾದ ತನಿಖಾ ತಂಡವು ಆರೋಪಿ ಲಿಜೇಶ್(30)ನನ್ನು ಶನಿವಾರ (ನವೆಂಬರ್ 30) ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ಲಿಜೇಶ್ ವೆಲ್ಡರ್ ಆಗಿ ಕೆಲಸ ಮಾಡುತ್ತಾನೆ. ಕದ್ದ ನಗದು ಮತ್ತು ನಾಣ್ಯಗಳನ್ನು ಲಿಜೇಶ್ ಅವರ ಮನೆಯ ಮಂಚದ ಕೆಳಗೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಕಳ್ಳತನವಾದ ಮರುದಿನವೇ ಆರೋಪಿಯು ಅದೇ ಮನೆಗೆ ಹಿಂದಿರುಗುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಈ ಕಳ್ಳತನ ಘಟನೆಯಲ್ಲಿ ಪರಿಚಿತ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಮನೆಯೊಳಗೆ ಉಳಿ, ಬೆರಳಚ್ಚು ಮುಂತಾದ ಪ್ರಮುಖ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 19ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ವ್ಯಾಪಾರಿ ಅಶ್ರಫ್ ಮತ್ತು ಅವರ ಕುಟುಂಬ ಮಧುರೈಗೆ ಹೋಗಿದ್ದಾಗ ಈ ಕಳ್ಳತನ ನಡೆದಿದೆ. ನವೆಂಬರ್ 24ರಂದು ಕುಟುಂಬದವರು ಮನೆಗೆ ಹಿಂದಿರುಗಿದ ನಂತರ ದರೋಡೆ ನಡೆದಿರುವುದನ್ನು ಪತ್ತೆ ಆಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ, ಚಿನ್ನಾಭರಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಲಾಕರ್ನಲ್ಲಿಟ್ಟು ಬೀಗ ಹಾಕಿ, ಕೀಯನ್ನು ಇನ್ನೊಂದು ರೂಮ್ನಲ್ಲಿ ಇರಿಸಲಾಗಿತ್ತು ಎಂದು ಕುಟುಂಬದ ತಿಳಿಸಿದ್ದಾರೆ.
ಅಡುಗೆ ಮನೆಯ ಕಿಟಕಿಯ ಕಬ್ಬಿಣದ ಗ್ರಿಲ್ ಅನ್ನು ಕಟ್ ಮಾಡುವ ಮೂಲಕ ಕಳ್ಳರು ಮನೆಗೆ ನುಗ್ಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಮೂವರು ವ್ಯಕ್ತಿಗಳು ಮನೆಯೊಳಗೆ ಪ್ರವೇಶಿಸಲು ಕಾಂಪೌಂಡ್ ಅನ್ನು ಹತ್ತುತ್ತಿರುವುದು ಕಂಡುಬಂದಿದೆ. ಫೋರೆನ್ಸಿಕ್ ವಿಭಾಗದ ತಂಡವು ಅಪರಾಧ ಸ್ಥಳದಿಂದ ಬೆರಳಚ್ಚು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಿದೆ. ನಂತರ ಪೊಲೀಸರು ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸಿ, ಕನ್ನ ಹಾಕಿದ್ದ ಖದೀಮನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)