ನ್ಯೂಸ್

ಆಪರೇಷನ್​ ಸಿಂಧೂರ ಹೆಸರು ಬರೆದಿದ್ದಕ್ಕೆ FIR ದಾಖಲು: ಕೇರಳ ನೆಲದಲ್ಲಿ ಪಾಕ್​ ಪರ ನಿಲುವು, ನಿಜಕ್ಕೂ ಇದು ಆಘಾತಕಾರಿ​! Operation Sindoor

Operation Sindoor : ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಹಿಂದೂ ಪ್ರವಾಸಿಗರನ್ನು ಹತ್ಯೆಗೈದ ಘಟನೆ ಕಳೆದ ಏಪ್ರಿಲ್​ 22ರಂದು ನಡೆದಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಘಟನೆಯನ್ನು ನನೆದರೆ ಇಂದಿಗೂ ಭಾರತೀಯರ ರಕ್ತ ಕುದಿಯುತ್ತದೆ. ಹೀಗಿರುವಾಗ ಕೇರಳದಲ್ಲಿ ಭಾರತೀಯರು ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.

ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್​ ಸಿಂಧೂರ ಹೆಸರಿನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇಂದಿಗೂ ನಮ್ಮ ಯೋಧರ ಯಶಸ್ವಿ ಕಾರ್ಯಾಚರಣೆಯನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಆಚರಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಆಪರೇಷನ್ ಸಿಂಧೂರ ಹೆಸರಿನ ಮೇಲೆ ಹೂವಿನ ಕಲೆ ರಚಿಸಲಾಗಿತ್ತು. ಆದರೆ, ಕೇರಳ ಪೊಲೀಸರು ಹೂವಿನ ಕಲೆ ರಚನೆ ಮಾಡಿದ್ದಕ್ಕಾಗಿ ಹಿಂದುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.

ಆಪರೇಷನ್​ ಸಿಂಧೂರ ಮಾತ್ರವಲ್ಲದೆ, ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವಿರುವ ಬ್ಯಾನರ್‌ಗಳನ್ನು ಸ್ಥಾಪಿಸಿದ್ದಕ್ಕಾಗಿಯೂ ಕೆಲವು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಏನಿದು ಘಟನೆ?

ಆಪರೇಷನ್ ಸಿಂಧೂರ ಸ್ಮರಣಾರ್ಥ ಗೌರವ ಸಲ್ಲಿಸಲು ಸೆಪ್ಟೆಂಬರ್ 4ರಂದು ಕೇರಳದ ಕೊಲ್ಲಂ ಜಿಲ್ಲೆಯ ಮುತ್ತುಪಿಲಕ್ಕಾಡ್‌ನಲ್ಲಿರುವ ಶ್ರೀ ಪಾರ್ಥಸಾರಥಿ ದೇವಾಲಯದ ಆವರಣದಲ್ಲಿ ಕೆಲವು ಹಿಂದುಗಳು ಆಪರೇಷನ್ ಸಿಂಧೂರ ಹೆಸರನ್ನು ಬರೆದು, ಹೂವುಗಳನ್ನು ಬಳಸಿಕೊಂಡು ಕೆಲವು ಆಕರ್ಷಕ ಚಿತ್ರಣಗಳನ್ನು ರಚಿಸಿದ್ದರು. ಆದರೆ, ಈ ಆಚರಣೆಯನ್ನು ಕೇರಳ ಪೊಲೀಸರು ವಿರೋಧಿಸಿದ್ದಾರೆ. ಅಲ್ಲದೆ, ಗಲಭೆಯನ್ನು ಸೃಷ್ಟಿಸುವ ಉದ್ದೇಶದಿಂದಲೇ ಹೂವಿನ ಕಲೆಯನ್ನು ರಚಿಸಲಾಗಿದೆ ಎಂಬ ಕಾರಣ ನೀಡಿ ಹಲವಾರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೂವಿನ ಕಲೆಯನ್ನು ರಚಿಸಿ, ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವಿರುವ ಧ್ವಜ ಕಂಬಗಳು ಮತ್ತು ಫ್ಲೆಕ್ಸ್ ಬೋರ್ಡ್ ಅನ್ನು ಸ್ಥಾಪಿಸಿದ್ದಕ್ಕಾಗಿ 27 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈದ್​ ಮಿಲಾದ್​ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲೆಂದೇ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಆದರೆ, ಈ ಕ್ರಮವನ್ನು ಅನ್ಯಾಯವೆಂದು ಕರೆದಿರುವ ಕೇರಳ ಬಿಜೆಪಿ, ಇದೊಂದು "ಘೋರ ಮತ್ತು ಸ್ವೀಕಾರಾರ್ಹವಲ್ಲ"ದ ಕ್ರಮ ಎಂದು ಖಂಡಿಸಿದೆ. ಅಲ್ಲದೆ, ಎಫ್‌ಐಆರ್ ಹಿಂಪಡೆಯಬೇಕೆಂದು ಒತ್ತಾಯಿಸಿರುವ ಬಿಜೆಪಿ, ಕೇರಳವೇನೂ ಪಾಕಿಸ್ತಾನವಲ್ಲ ಎಂದು ಟೀಕಾ ಪ್ರಹಾರ ಮಾಡಿದೆ.

ಪ್ರಸ್ತುತ ಘಟನೆಯು ಸಿಪಿಐ(ಎಂ) ನೇತೃತ್ವದ ಎಡಪಂಥೀಯ ಆಳ್ವಿಕೆಯಲ್ಲಿರುವ ಸರ್ಕಾರಗಳ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯಶಾಲಿ ಹಿಂದೂ ರಾಜ ಛತ್ರಪತಿ ಶಿವಾಜಿ ಮಹಾರಾಜರ ಆಚರಣೆಯು "ಗಲಭೆಗಳನ್ನು ಸೃಷ್ಟಿಸುವುದಕ್ಕೆ" ಸಮಾನವೇ ಎಂದು ಪ್ರಶ್ನಿಸಿದ್ದಾರೆ. ಆದಾಗ್ಯೂ, ಕೇರಳದಲ್ಲಿ ಹಿಂದೂಗಳು ತಮ್ಮ ಆಚರಣೆಯ ಚಟುವಟಿಕೆಗಳಲ್ಲಿ ಅನಗತ್ಯ ಪೊಲೀಸ್ ಹಸ್ತಕ್ಷೇಪವನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಈ ರೀತಿ ನಡೆದಿದೆ.

ಕಳೆದ ವರ್ಷ ತ್ರಿಶೂರ್‌ನಲ್ಲಿ ನಡೆದ ಪೂರಂ ಉತ್ಸವದ ಸಂದರ್ಭದಲ್ಲಿ, ಕೇರಳ ಪೊಲೀಸರು ಭಕ್ತರ ಮೇಲೆ ಅತಿಯಾದ ಬಲಪ್ರಯೋಗ ಮಾಡಿ ದೌರ್ಜನ್ಯ ಎಸಗಿದ್ದರು. ವಿವಿಧ ದೇವಾಲಯಗಳ ನಡುವಿನ ಸ್ನೇಹಪರ ಪೈಪೋಟಿ ಮತ್ತು ಸ್ಪರ್ಧೆಯನ್ನು ಒಳಗೊಂಡ ವಿವಿಧ ಉತ್ಸವಗಳಿಗೆ ಕೇರಳ ಪೊಲೀಸರು ಅಡ್ಡಿಪಡಿಸಿದರು ಮತ್ತು ತೀವ್ರ ನಿರ್ಬಂಧಗಳನ್ನು ವಿಧಿಸಿದರು. ಅಲ್ಲದೆ, ಜನಸಂದಣಿಯನ್ನು ನಿಯಂತ್ರಿಸಲು ದೇವಾಲಯದ ಮೆರವಣಿಗೆಗಳ ಸಮಯದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದರು. ಉತ್ಸವದ ಆಚರಣೆಗಳ ಮೇಲೆ ಪೊಲೀಸರ ಅತಿಯಾದ ನಿರ್ಬಂಧಗಳಿಂದಾಗಿ, ಭಾಗವಹಿಸುವ ದೇವಾಲಯಗಳಲ್ಲಿ ಒಂದು ಉತ್ಸವ ನಿಂತಿತು. ಇದರಿಂದ ಹಲವಾರು ಕಲಾವಿದರು ಮತ್ತು ಭಕ್ತರು ದೇವಾಲಯದಿಂದ ಹೊರಟುಹೋದರು.

ಅದೇ ರೀತಿ, 2023ರ ಫೆಬ್ರವರಿಯಲ್ಲಿ ಕೇರಳದ ತಿರುವನಂತಪುರದ ದಕ್ಷಿಣ ಹೊರವಲಯದಲ್ಲಿರುವ ವೆಲ್ಲಯಾನಿ ಭದ್ರಕಾಳಿ ದೇವಸ್ಥಾನಕ್ಕೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂಬ ಕಾರಣ ನೀಡಿ, ಹಬ್ಬದ ಸಮಯದಲ್ಲಿ ಕೇಸರಿ ಅಲಂಕಾರವನ್ನು ಬಳಸದಂತೆ ಸೂಚನೆ ನೀಡಿದರು. ಸಾಂಪ್ರದಾಯಿಕವಾಗಿ ಹಬ್ಬದ ಸಮಯದಲ್ಲಿ ದೇವಾಲಯವನ್ನು ಕೇಸರಿ ಬಣ್ಣದಿಂದ ಅಲಂಕರಿಸಲಾಗುತ್ತದೆ. ಆದರೆ, ಕೇಸರಿ ಬಣ್ಣವಲ್ಲದೆ ಎಲ್ಲ ಬಣ್ಣಗಳ ಧ್ವಜಗಳು ಮತ್ತು ಬಂಟಿಂಗ್‌ಗಳನ್ನು ಬಳಸುವಂತೆ ಪೊಲೀಸರು ದೇವಸ್ಥಾನಕ್ಕೆ ಸಲಹೆ ನೀಡಿದರು. ಈ ರೀತಿ ಸಾಕಷ್ಟು ಬಾರಿ ಕೇರಳದಲ್ಲಿ ಹಿಂದು ವಿರೋಧ ಕ್ರಮಗಳು ನಡೆದಿವೆ. ಇದೀಗ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)