ತ್ರಿಸ್ಸುರ್(ಕೇರಳ): ಜೀವ ಉಳಿಸುವ ಆಂಬುಲೆನ್ಸ್ನಿಂದಲೇ 23 ವರ್ಷದ ಅಸಿಸ್ಟೆಂಟ್ ನರ್ಸ್ ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ಕೇರಳದ ತ್ರಿಸ್ಸುರ್ನಲ್ಲಿ ಸೋಮವಾರ ಸಂಜೆ ನಡೆದಿದೆ. ತ್ರಿಸ್ಸುರ್ನ ಅಂಥಿಕಾಡ್ನಲ್ಲಿ ಕಾರು ಮತ್ತು ಆಂಬುಲೆನ್ಸ್ ನಡುವೆ ಮುಖಾಮುಖಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನರ್ಸ್ ಜೀವ ಕಳೆದುಕೊಂಡಿದ್ದಾರೆ.
ಡೊನ್ನಾ ಸಿ ವಾರ್ಘಿಸ್ ಮೃತ ನರ್ಸ್. 108 ಆಂಬುಲೆನ್ಸ್ನಲ್ಲಿ ಕರ್ತವ್ಯದಲ್ಲಿದ್ದ ಡೊನ್ನಾ ರೋಗಿಯೊಬ್ಬರನ್ನು ಕರೆ ತರಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಎದುರಿಗೆ ಬರುತ್ತಿದ್ದ ಕಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ನೆಲಕ್ಕುರುಳಿದೆ. ಇದರಿಂದಾಗಿ ಡೊನ್ನಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡೊನ್ನಾ ಅವರು ವಾರ್ಘಿಸ್ ಎಂಬುವವರ ಮಗಳಾಗಿದ್ದು, ಘಟನೆಯಲ್ಲಿ ಆಂಬುಲೆನ್ಸ್ ಚಾಲಕ ಅದೃಷ್ಟವಶಾತ್ ಬದುಕುಳಿದಿದ್ದಾನೆ ಎಂದು ಅಂಥಿಕಾಡ್ ಸಂಚಾರಿ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಡೊನ್ನ ಸಾವಿಗೆ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಸಂತಾಪ ಸೂಚಿಸಿದ್ದು, ಡೊನ್ನಾ ವರ್ಘೀಸ್ ಆಂಬುಲೆನ್ಸ್ ಅಪಘಾತದಲ್ಲಿ ಮೃತಪಟ್ಟರು ಎಂಬುದನ್ನು ಕೇಳಿ ನನಗೆ ತುಂಬಾ ನೋವಾಯಿತು. ಅಂಥಿಕಾಡ್ ಆಸ್ಪತ್ರೆಯ 108ರಲ್ಲಿ ಅವರು ತುರ್ತು ವೈದ್ಯಕೀಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡೊನ್ನಾ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಕೇಳಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಅಂದಹಾಗೆ ಡೊನ್ನಾ ಪೆರಿಂಗುಟ್ಟುಕರದಲ್ಲಿ ತನ್ನ ಪಾಲಕರೊಂದಿಗೆ ವಾಸವಿದ್ದರು. ಸಮೀಪದ ಅಂಥಿಕಾಡ್ ಆಸ್ಪತ್ರೆಗೆ ಕಳೆದ ಎರಡು ತಿಂಗಳ ಹಿಂದಷ್ಟೇ ಸೇರಿದ್ದರು. ಕರೊನಾ ತುರ್ತು ಸಂದರ್ಭ ಹಿನ್ನೆಲೆಯಲ್ಲಿ ಅವರನ್ನು 2 ವಾರಗಳಿಂದ ಆಂಬುಲೆನ್ಸ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. (ಏಜೆನ್ಸೀಸ್)