ತಿರುವನಂತಪುರಂ: ಕರೊನಾ ಲಾಕ್ಡೌನ್ನಿಂದಾಗಿ ವಾಹನ ವ್ಯವಸ್ಥೆಯಿಲ್ಲದೇ ಚಿಕಿತ್ಸೆಗಾಗಿ ಸಾರ್ವಜನಿಕರು ಪರದಾಡುತ್ತಿದ್ದರೂ ಮಾನವೀಯತೆ ಮೆರೆಯದ ಕೆಲ ಘಟನೆಗಳು ಮಾನವ ಸಮುದಾಯವನ್ನು ಪ್ರಶ್ನಿಸುವಂತಿವೆ.
ಇತ್ತೀಚೆಗಷ್ಟೇ ಬಿಹಾರದ ಜೆಹಾನಬಾದ್ನಲ್ಲಿ ವಾಹನ ಸಿಗದೇ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಮಗು ಸಾವಿಗೀಡಾಗಿತ್ತು. ಬಳಿಕ ಆಸ್ಪತ್ರೆಯ ಸಿಬ್ಬಂದಿಯು ಸಹ ಆಂಬುಲೆನ್ಸ್ ನೀಡಲು ನಿರಾಕರಿಸಿದ್ದಕ್ಕೆ ತಾಯಿಯೊಬ್ಬಳು ಮಗುವಿನ ಮೃತದೇಹ ಹೊತ್ತು ನಡೆದಿದ್ದ ಘಟನೆ ಮನಕಲಕುವಂತಿತ್ತು.
ಇದೀಗ ಇದೇ ರೀತಿಯ ಮತ್ತೊಂದು ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ 48 ವರ್ಷದ ರಾಯ್ ಪಣಲೂರ್ ಗ್ರಾಮದ ನಿವಾಸಿ. ಅನಾರೋಗ್ಯಕ್ಕೀಡಾಗಿದ್ದ ತಂದೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪೊಲೀಸರು ತಡೆದಿದ್ದಾರೆ. ಈ ವೇಳೆ ಎಷ್ಟೇ ಬೇಡಿಕೊಂಡರು ಬಿಡಲು ಒಪ್ಪದಿದ್ದಾಗ, ತಂದೆಯನ್ನು ಮಗುವಿನಂತೆ ತೋಳಿನಲ್ಲಿ ಹೊತ್ತುಕೊಂಡು ಸುಮಾರು 1 ಕಿ.ಮೀ ಸಾಗಿದ್ದಾರೆ. ಈ ವೇಳೆ 83 ವರ್ಷದ ಆತನ ತಾಯಿ ಲೀಲಮ್ಮ ಕೂಡ ಹಿಂದೆ ಓಡಿಬಂದಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿ ಅಮಾನವೀಯತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಯ್, ನನ್ನ ತಂದೆಗೆ 88 ವರ್ಷ. ಅವರು ಮಧುಮೇಹ ರೋಗಿ. ಅಧಿಕ ರಕ್ತದೊತ್ತಡದಿಂದ ಹಾಗೂ ಮೂತ್ರ ಸಂಬಂಧಿ ಕಾಯಿಲೆಯಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಓರ್ವ ಪೊಲೀಸ್ ಅಧಿಕಾರಿ ಆಸ್ಪತ್ರೆ ಸಮೀಪದ ಸೇತುವೆ ಬಳಿ ತಡೆದಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಹೊರಡಲು ಅನುಮತಿ ನೀಡಿದ್ದಾರೆ. ಆಟೋ ತೆಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆಟೋವನ್ನು ತಡೆದಿದ್ದಾರೆ. ಅವರು ನಾನು ಹೇಳುವುದನ್ನು ಕೇಳಲು ಸಿದ್ಧರಾಗಿರಲಿಲ್ಲ. ಕಣ್ಣೀರಿಟ್ಟು ಬೇಡಿಕೊಂಡೆ. ಆದರೂ ನನ್ನ ಮಾತನ್ನು ಕೇಳಲಿಲ್ಲ. ಬಳಿಕ ನನ್ನ ತಂದೆಯನ್ನು ಹೊತ್ತುಕೊಂಡೆ ಸುಮಾರು 1 ಕಿ.ಮೀ ದೂರದಲ್ಲಿದ್ದ ಆಸ್ಪತ್ರೆಗೆ ತಲುಪಿದೆ ಎಂದು ವಿವರಿಸಿದ್ದಾರೆ.
ಸದ್ಯ ರಾಯ್ ತಂದೆಯ ಆರೋಗ್ಯ ಸುಧಾರಿಸಿದ್ದು, ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಪೊಲೀಸ್ ಅಧಿಕಾರಿಯ ಅಮಾನವೀಯತೆ ಎಲ್ಲರೂ ಪ್ರಶ್ನಿಸುವಂತಿದೆ. (ಏಜೆನ್ಸೀಸ್)