ನ್ಯೂಸ್

ಕಾಂಡಿಮೇಂಟ್ಸ್‌ನಲ್ಲಿ ಕೇರಳ ಲಾಟರಿ ಮಾರಾಟ, ಅಂಗಡಿ ಮಾಲೀಕ ಸೆರೆ

ಬೆಂಗಳೂರು: ಕಾಂಡಿಮೆಂಟ್ಸ್ ಅಂಗಡಿಯಲ್ಲಿ ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮತ್ತಿಕೆರೆ ಹಳೆಯ ಎಚ್‌ಎಂಟಿ ರಸ್ತೆ ನಿವಾಸಿ ಸುನೀಲ್ ಬಾಬು (49) ಬಂಧಿತ. ಆರೋಪಿಯಿಂದ 19,560 ರೂ. ಮೌಲ್ಯದ ವಿವಿಧ ಮುಖಬೆಲೆಯ 454 ಲಾಟರಿ ಟಿಕೆಟ್ ಮತ್ತು 5,500 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಕಣ್ಣೂರು ಮೂಲದ ಸುನೀಲ್ ಬಾಬು, ಮತ್ತಿಕೆರೆ ಓಲ್ಡ್ ಎಚ್‌ಎಂಟಿ ರಸ್ತೆಯ ವಿನಾಯಕ ಕಾಂಡಿಮೆಂಟ್ಸ್ ಅಂಗಡಿ ನಡೆಸುತ್ತಿದ್ದ. ಕೇರಳಕ್ಕೆ ಹೋದಾಗ ವಿನಾಯಕ ಲಾಟರಿ ಏಜೆನ್ಸಿಯಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸಿ ನಗರಕ್ಕೆ ತಂದು ಅಕ್ರಮವಾಗಿ ಕಾಂಡಿಮೆಂಟ್ಸ್‌ನಲ್ಲಿ ಇರಿಸಿಕೊಂಡು ಮಾರಾಟ ಮಾಡುತ್ತಿದ್ದ.

ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅಂಗಡಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.