ಬೆಂಗಳೂರು: ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ತನ್ನ ರಾಜ್ಯದ ರೋಗಿಗಳನ್ನು ಕರ್ನಾಟಕದ ಕರಾವಳಿಯ ಆಸ್ಪತ್ರೆಗಳಿಗೆ ದಾಟಿಸಲು ಇನ್ನಿಲ್ಲದ ಪ್ರಯತ್ನ ಮಾಡಿ, ಸುಪ್ರಿಂಕೋರ್ಟ್ ಮೆಟ್ಟಿಲೇರಿ ಹಠಮಾರಿತನ ಪ್ರದರ್ಶಿಸಿದ್ದ ಕೇರಳ ಸರ್ಕಾರ ಇದೀಗ ಮತ್ತೆ ಕ್ಯಾತೆ ತೆಗೆದಿದೆ. ಕೇರಳದ 12 ಕರೊನಾ ಶಂಕಿತರಿಗೆ ಕರ್ನಾಟಕದಲ್ಲಿ ಚಿಕಿತ್ಸೆ- ಆಶ್ರಯ ನೀಡಿ, ಕ್ವಾರಂಟೈನ್ ಅವಧಿಯಲ್ಲೂ ಆಶ್ರಯ ಮುಂದುವರಿಸಿ ಬಳಿಕ ಕೇರಳಕ್ಕೆ ಬಿಗಿ ಭದ್ರತೆಯಲ್ಲಿ ಕಳಿಸಲಾಗಿತ್ತು.
ಆದರೆ, ಅವರನ್ನು ಪಿಣರಾಯಿ ವಿಜಯನ್ ಸರ್ಕಾರ ತನ್ನ ನೆಲದಲ್ಲೂ ಇಳಿಯಗೊಡದೇ ರಾತ್ರೋರಾತ್ರಿ ವಾಪಸ್ ಬೆಂಗಳೂರಿಗೆ ಕಳಿಸಿದೆ. ಇದೀಗ ಕೇರಳದ 12 ನಿವಾಸಿಗಳಿಗೆ ಕರ್ನಾಟಕ ಸರ್ಕಾರ ಬೆಂಗಳೂರಿನ ಶಾದಿ ಮಹಲ್ವೊಂದರಲ್ಲಿ ಆಶ್ರಯ ನೀಡಿದೆ.
ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕೇರಳಿಗರು ತಮ್ಮೂರಿಗೆ ತೆರಳಲು ಬಯಸಿದರು. ಹೀಗಾಗಿ ಮಿನಿಬಸ್ ಮಾಡಿ ಪಾಲಕ್ಕಾಡ್, ಎರ್ನಾಕುಲಂಗೆ ಕಳಿಸಲು ವ್ಯವಸ್ಥೆ ಮಾಡಲಾಗಿತ್ತು. ಏಪ್ರಿಲ್ 14ರಂದು ಈ ಬಸ್ ಅನ್ನು ವಯಲಾರ್ ಚೆಕ್ಪೋಸ್ಟ್ ನಲ್ಲಿ ತಡೆದು ನಿಲ್ಲಿಸಲಾಗಿತ್ತು. ವಿಶೇಷವೆಂದರೆ ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿಗಳು ಹಾಗೂ ಪಾಲಕ್ಕಾಡ್ ಅಧಿಕಾರಿಗಳು ದೂರವಾಣಿ ನಡುವೆ ಚರ್ಚೆ ನಡೆದರೂ ಉದ್ದೇಶ ಫಲಕಾರಿಯಾಗಲಿಲ್ಲ. ಕರ್ನಾಟಕದಿಂದ ತೆರಳಿದ್ದ 12 ಮಂದಿ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ಟೆಸ್ಟಿಂಗ್ ಮುಗಿಸಿ ಮತ್ತೆ 14 ದಿನ ಕ್ವಾರಂಟೈನ್ನಲ್ಲಿದ್ದರು ಎಂದು ಕರ್ನಾಟಕದ ಮನವರಿಕೆ ಪ್ರಯತ್ನಕ್ಕೆ ಪಾಲಕ್ಕಾಡ್ ಅಧಿಕಾರಿಗಳು ಒಪ್ಪಲಿಲ್ಲ. ಕನಿಷ್ಠ ಅವರನ್ನು ಅಲ್ಲಿನ ಸರ್ಕಾರ ತನ್ನ ಕ್ವಾರಂಟೈನ್ ಕೇಂದ್ರದಲ್ಲಾದರೂ ಆಶ್ರಯಕೊಟ್ಟಿದ್ದರೂ ಸಾಕಿತ್ತು. ಆದರೆ, ಅಲ್ಲಿನ ಸರ್ಕಾರ ಹಠಮಾರಿ ಧೋರಣೆ ಪ್ರದರ್ಶಿಸಿತು ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳದ ದ್ವಂದ್ವ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದಾಗಲೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕೊಡಗು ಗಡಿ ಮೂಲಕ ಮಂಗಳೂರಿಗೆ ಆಂಬುಲೆನ್ಸ್ ಪ್ರವೇಶಕ್ಕೆ ಅವಕಾಶ ಪಡೆದುಕೊಂಡಿದ್ದ ಕೇರಳ, ಇದೀಗ ಕರೊನಾ ಟೆಸ್ಟ್ನಲ್ಲಿ ನೆಗೆಟಿವ್ ಬಂದು, 28 ದಿನ ಕ್ವಾರಂಟೈನ್ನಲ್ಲಿದ್ದವರನ್ನು ತನ್ನ ರಾಜ್ಯಕ್ಕೆ ಬಿಟ್ಟುಕೊಳ್ಳಲು ಸಿದ್ಧವಿಲ್ಲ.