ತಿರುವನಂತಪುರ: ಕರೊನಾ ವೈರಸ್ ಹತ್ತಿರ ಬರಬಾರದು ಎಂದರೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ, ಲಾಕ್‌ಡೌನ್ ಇರುವ ಕಾರಣ ಮನೆಯಿಂದ ಹೊರಕ್ಕೆ ಬರಬೇಡಿ ಎಂದು ಪೊಲೀಸರು ಪದೇ ಪದೇ ಹೇಳುತ್ತಲೇ ಇದ್ದಾರೆ. ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದರೆ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋದರೆ ಮಾತಿನಿಂದಲೂ ಹೇಳುತ್ತಾರೆ, ಕೇಳದಿದ್ದರೆ ದಂಡದ ರುಚಿಯನ್ನೂ ತೋರಿಸುತ್ತಿದ್ದಾರೆ.
ಆದರೆ ಬುದ್ಧಿಮಾತು ಹೇಳುವ ಪೊಲೀಸರಿಗೇ ನಿರ್ಗತಿಕ ವ್ಯಕ್ತಿಯೊಬ್ಬ ಪಾಠ ಮಾಡಿದ ವೀಡಿಯೋ ಭಾರಿ ವೈರಲ್ ಆಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಅದೂ ಆಹಾರ ನೀಡಲು ಹೋದ ಸಂದರ್ಭದಲ್ಲಿ ಹಸಿದ ಹೊಟ್ಟೆಯನ್ನೂ ಗಮನಿಸದೇ ರೂಲ್ಸ್ ಫಾಲೋ ಮಾಡಿದ ವ್ಯಕ್ತಿಯನ್ನು ಎಲ್ಲರೂ ಹಾಡಿ ಕೊಂಡಾಡಿದ್ದಾರೆ.
ಇಂಥದ್ದೊಂದು ಕುತೂಹಲದ ಘಟನೆ ನಡೆದದ್ದು ಕೇರಳದ ಪೆರಂಬ್ರಾ ಎಂಬಲ್ಲಿ. ಬಡವರು ಇರುವಲ್ಲಿಗೆ ಹೋಗಿ ಆಹಾರ ಪೂರೈಸಲು ಅಲ್ಲಿಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ಅದೇ ರೀತಿ ಮೂವರು ಪೊಲೀಸರು ಮಾಸ್ಕ್ ಧರಿಸಿ ರೌಂಡ್ಸ್‌ನಲ್ಲಿ ಇದ್ದಾಗ, ಅಂಗಡಿಯ ಎದುರು ಒಬ್ಬ ವ್ಯಕ್ತಿ ಮಲಗಿದ್ದುದನ್ನು ನೋಡಿದ್ದಾರೆ. ಆತ ಏನಾದರೂ ತಿಂದಿದ್ದಾನೆಯೇ, ಹಸಿವಾಗಿದೆಯೇ ಎಂದು ಪೊಲೀಸರು ವಿಚಾರಿಸಿದಾಗ ಆತ ಏನೂ ತಿಂದಿಲ್ಲ, ಹಸಿವಾಗುತ್ತಿದೆ ಎಂದು ಹೇಳಿದ್ದಾನೆ.
ಕೂಡಲೇ ಪೊಲೀಸರು ಆಹಾರದ ಪ್ಯಾಕೆಟ್ ತಂದುಕೊಡಲು ಮುಂದಾದಾಗ, ಈ ವ್ಯಕ್ತಿ ಕೂಡಲೇ ‘ದೂರ ಹೋಗಿ’ ಎನ್ನುವಂತೆ ಸಂಜ್ಞೆ ಮಾಡಿದ್ದಾನೆ. ಪೊಲೀಸರು ಅಚ್ಚರಿಯಿಂದ ದೂರ ಸರಿದಾಗ, ತನ್ನ ಶರ್ಟ್‌ನಿಂದ ಮೂಗನ್ನು ಮುಚ್ಚಿಕೊಂಡ ವ್ಯಕ್ತಿ ಸ್ವಲ್ಪ ಮುಂದೆ ಹೋಗಿ ಅಲ್ಲಿರುವ ಕಲ್ಲಿನಿಂದ ಒಂದು ಸರ್ಕಲ್ ಹಾಕಿ ಅದರಲ್ಲಿ ನೀರು ಮತ್ತು ಆಹಾರ ಇಡುವಂತೆ ಹೇಳಿದ್ದಾನೆ. ಪೊಲೀಸರು ಹಾಗೆಯೇ ಮಾಡಿ ಹೋಗಿದ್ದಾರೆ.
ಹತ್ತಿರವೇ ಇರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸುಮ್ಮನೆ ಮನೆಯಲ್ಲಿ ಇರಿ ಎಂದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ವ್ಯಕ್ತಿಗಳೂ ಈ ನಿರ್ಗತಿಕನಿಂದ ಕಲಿಯಬೇಕಾಗಿದ್ದು ಸಾಕಷ್ಟಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)