ಎನ್.ಆರ್.ಪುರ ತಾಲೂಕು ಬಿ.ಎಚ್.ಕೈಮರದಲ್ಲಿ ಕೇರಳ ಹಿಂದು ಸಮಾಜದ ತಾಲೂಕು ಘಟಕದಿಂದ ಆಯೋಜಿಸಿದ್ದ ವಾರ್ಷಿಕೋತ್ಸವವನ್ನು ಪಿ.ಆರ್.ಸುಕುಮಾರ್ ಉದ್ಘಾಟಿಸಿದರು. ಬಿಜುಪುಳಿಕ್ಕಲೆಡತ್ತ್, ಪಿ.ಆರ್.ಸದಾಶಿವ, ವೆನಿಲ್ಲಾಭಾಸ್ಕರ್, ಅರವಿಂದಾಚಾರ್, ಸುಧಾಕರಾಚಾರ್ಯ, ಕೆ.ಪಿ.ಸುರೇಶ್‌ಕುಮಾರ್, ಮನೋಹರ್ ಇದ್ದರು. 
ನ್ಯೂಸ್

ಸಂಸ್ಕೃತಿಯ ಬೇರುಗಳು ಸದೃಢವಾದಲ್ಲಿ ಸಮಾಜದ ಪ್ರಗತಿ

ಎನ್.ಆರ್.ಪುರ: ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿ, ಸಂಘಟಿತರಾದಾಗ ಮಾತ್ರ ಸಮುದಾಯ ಪ್ರಗತಿ ಹೊಂದಲು ಸಾಧ್ಯ ಎಂದು ಕೇರಳದ ಇಡುಕ್ಕಿಯ ಪಚ್ಚಡಿ ಶ್ರೀ ನಾರಾಯಣಗುರು ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿಜುಪುಳಿಕ್ಕಲೆಡತ್ತ್ ಹೇಳಿದರು.
ಬಿ.ಎಚ್.ಕೈಮರದಲ್ಲಿರುವ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ಕೇರಳ ಹಿಂದು ಸಮಾಜದ ತಾಲೂಕು ಘಟಕದಿಂದ ಆಯೋಜಿಸಿದ್ದ ಎರಡನೇ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಪ್ರತಿ ನಿತ್ಯ ರಾಮಾಯಣ, ಮಹಾಭಾರತ, ಭಗವದ್ಗೀತೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಪ್ರತಿನಿತ್ಯ ಪ್ರಾರ್ಥನೆ ಮಾಡಬೇಕು. ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಹೋಗಬೇಕು. ಗುರುಹಿರಿಯರನ್ನು ಗೌರವಿಸಬೇಕು, ವೃದ್ಧಾಪ್ಯದಲ್ಲಿ ಪಾಲಕರನ್ನು ವಾತ್ಸಲ್ಯದಿಂದ ನೋಡಿಕೊಳ್ಳಬೇಕು. ಪ್ರಕೃತಿಯನ್ನು ಆರಾಧಿಸುವ ಮತ್ತು ಉಳಿಸುವ ಕೆಲಸ ಮಾಡಬೇಕು ಎಂದರು.
ಕೇರಳ ಹಿಂದು ಸಮಾಜದ ಸಂಚಾಲಕ ಪಿ.ಆರ್.ಅರವಿಂದ ಮಾತನಾಡಿ, ಸಮಾಜದ ಸದಸ್ಯರ ಆಧ್ಯಾತ್ಮಿಕ ಅಭಿವೃದ್ಧಿಗಾಗಿ ರಾಮಾಯಣ ಪಠಣ, ಭಜನೆ, ಸಂಧ್ಯಾನಾಮಗಳನ್ನು ಕಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕೇರಳ ಹಿಂದು ಸಮಾಜದ ಮುಖ್ಯಸ್ಥ, ವಕೀಲ ಕೆ.ಪಿ.ಸುರೇಶ್‌ಕುಮಾರ್ ಮಾತನಾಡಿ, ಹಿಂದುಗಳು ಆಚರಿಸುವ ಸನಾತನ ಧರ್ಮದಲ್ಲಿ ದೇವರ ಆರಾಧನೆ ದೇವಸ್ಥಾನಕ್ಕೆ ಸೀಮಿತವಾಗದೆ ನೃತ್ಯ, ಹಾಡು, ಭಜನೆಗಳಂತಹ ಕಲೆಗಳ ರೂಪದಲ್ಲಿಯೂ ಆರಾಧಿಸಲು ಅವಕಾಶ ನೀಡಿದೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹೃದಯವಂತ ಡಾ. ವಿಷ್ಣುವರ್ಧನ್ ಪ್ರಶಸ್ತಿ ಪಡೆದ ಗಾಯಕಿ ವಿಶ್ರೇಯ, ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಸಿಂಚನಾ ಅವರನ್ನು ಸನ್ಮಾನಿಸಲಾಯಿತು.
ಕೇರಳ ಹಿಂದು ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪಿ.ಆರ್.ಸುಕುಮಾರ್, ಸಮಾಜದ ಕೆ.ಎನ್.ಶಿವದಾಸ್, ವೆನಿಲ್ಲಾ ಭಾಸ್ಕರ್, ಸುಧಾಕರ ಆಚಾರ್ಯ, ಸಮಾಜದ ಒ.ಆರ್.ಬಿನು, ಮನೋಹರ್, ಕೆ.ಕೆ.ಸಜಿ, ಭಾರತಿ ಅರವಿಂದಾಚಾರ್ ಇತರರಿದ್ದರು.