ನ್ಯೂಸ್

ಯೂಟ್ಯೂಬರ್​ ಜ್ಯೋತಿ ಮಲ್ಹೋತ್ರಾಳನ್ನು ಡಿಜಿಟಲ್ ಸಂಪರ್ಕ ಅಭಿಯಾನದ ಭಾಗವಾಗಿ ನೇಮಿಸಿಕೊಂಡಿದ್ದ ಕೇರಳ ಸರ್ಕಾರ| jyoti-malhotra

ತಿರುವನಂತಪುರಂ; ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲ್ಪಟ್ಟ ಹರಿಯಾಣದ 33 ವರ್ಷದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಕೇರಳ ಪ್ರವಾಸೋದ್ಯಮ ಇಲಾಖೆಯು ಅಧಿಕೃತ ಡಿಜಿಟಲ್ ಸಂಪರ್ಕ ಅಭಿಯಾನದ ಭಾಗವಾಗಿ ನೇಮಿಸಿಕೊಂಡಿತ್ತು ಎಂದು ಹೇಳಲಾಗಿದೆ.

'ಆಕೆಯ ವಿರುದ್ಧ ಗೂಢಚಾರಿಕೆ ಆರೋಪ ಕೇಳಿಬರುವ ಮುನ್ನವೇ ರಾಜ್ಯಕ್ಕೆ ಕರೆಸಿಕೊಳ್ಳಲಾಗಿತ್ತು. ಈ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇರಲಿಲ್ಲ' ಎಂದು ಕೇರಳ ಪ್ರವಾಸೋದ್ಯಮ ಸಚಿವ ಮೊಹಮ್ಮದ್ ರಿಯಾಜ್ ಪ್ರತಿಕ್ರಿಯಿಸಿದ್ದಾರೆ.

ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್‌ಗೆ ಹೆಸರುವಾಸಿಯಾದ ಮಲ್ಹೋತ್ರಾ, ಕೇರಳವನ್ನು ಜಾಗತಿಕ ಪ್ರಯಾಣ ತಾಣವಾಗಿ ಪ್ರಚಾರ ಮಾಡಲು 2024 ಮತ್ತು 2025 ರ ನಡುವೆ ರಾಜ್ಯವು ಆಹ್ವಾನಿಸಿದ ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದರು. ಅವರ ವಸತಿ ಮತ್ತು ಪ್ರಯಾಣ ವೆಚ್ಚಗಳನ್ನು ಕೇರಳ ಸರ್ಕಾರವು ಸಂಪೂರ್ಣವಾಗಿ ಭರಿಸಿತ್ತು.

ಯೂಟ್ಯೂಬರ್ ಜ್ಯೋತಿ ಮಲ್ನೋತ್ರಾ ಅವರನ್ನು ಈ ಹಿಂದೆ ಕೇರಳ ಪ್ರವಾಸೋದ್ಯಮ ಇಲಾಖೆಯೇ ಕರೆಸಿಕೊಂಡು ಪ್ರಚಾರದ ವಿಡಿಯೊಗಳನ್ನು ಮಾಡಿದ್ದಾಗಿ ತಿಳಿದುಬಂದಿದೆ. ಇಲಾಖೆಯ ಪರವಾಗಿ ಜ್ಯೋತಿ ಸೇರಿದಂತೆ ಸಾಮಾಜಿಕ ಜಾಲತಾಣದ ಹಲವು ಇನ್‌ಫ್ಲುಯೆನ್ಸರ್‌ಗಳು ಕಳೆದೆರಡು ವರ್ಷಗಳಿಂದ ಕೆಲಸ ಮಾಡಿದ್ದರು ಎನ್ನಲಾಗಿದೆ.

(ಏಜೆನ್ಸೀಸ್)

ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸ್ವಲ್ಪ ಮೊದಲು ಜ್ಯೋತಿ ಮಲ್ಹೋತ್ರಾ ಕೂಡ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಪೊಲೀಸರು ಕಂಡುಕೊಂಡು ತನಿಖೆ ಮುಂದುವರೆಸಿದ್ದಾರೆ.

ಮಲ್ಲೋತ್ರಾ ಕಳೆದ ವರ್ಷ ಕೇರಳಕ್ಕೆ ಭೇಟಿ ನೀಡಿದ್ದು, ಹಲವಾರು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್ ಜೊತೆಗೆ ಮುನ್ನಾರ್, ಕೋವಲಂ, ಅಲಪ್ಪುಳ, ಕೋಯಿಕ್ಕೋಡ್ ಜಿಲ್ಲೆಗೆ ಭೇಟಿ ನೀಡಿದ್ದು, ಇಡೀ ರಾಜ್ಯದಾದ್ಯಂತ ರೈಲಿನ ಮೂಲಕ ಪ್ರವಾಸ ಮಾಡಿದ್ದರು. ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಹಲವು ಯುವಕರು ಸೇರಿ ಸುದ್ದಿಯಾಗಿದ್ದ ಕಾಸರಗೋಡಿನ ಪಡನ್ನ ಗ್ರಾಮಕ್ಕೂ ಭೇಟಿ ನೀಡಿದ್ದು ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಕಂಡುಬಂದಿದೆ.