ತಿರುವನಂತಪುರಂ: ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳು ಮಂಗಳಮುಖಿಯರಿಗೂ ಅನ್ವಯವಾಗುತ್ತಿದ್ದರೂ ನಮ್ಮ ಸಮಾಜ ಇನ್ನೂ ಅವರನ್ನು ಸಮಾನವಾಗಿ ಕಾಣುತ್ತಿಲ್ಲ. ಇದಕ್ಕೆ ಅನೇಕ ಉದಾಹರಣೆಗಳನ್ನು ನಾವು ಆಗಾಗ ಕಾಣುತ್ತೇವೆ.
ಇದೀಗ ಇಂತಹದ್ದೇ ಘಟನೆಯೊಂದು ಮರುಕಳಿಸಿದೆ. ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಸುದ್ದಿ ದೇಶದ ಮಂಗಳಮುಖಿಯರಿಗೆ ಬಹುದೊಡ್ಡ ಸಂತಸ ನೀಡಿತ್ತು. ಆದರೆ, ಅವರ ಸಂತಸ ಬಹಳ ದಿನ ಉಳಿಯುವ ಹಾಗೇ ಕಂಡಿಲ್ಲ.
ಹೌದು ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗಾರಾ ವಿಧಾನಸಭೆ ಚುನಾವಣೆಗೆ ಅನನ್ಯಾ ಕುಮಾರಿ ಅಲೇಕ್ಸ್ ಎನ್ನುವ ಮಂಗಳಮುಖಿಯೊಬ್ಬರು ಡೆಮಾಕ್ರಟಿಕ್ ಸೋಷಿಯಲ್ ಜಸ್ಟಿಸ್ ಪಾರ್ಟಿಯಿಂದ ಸ್ಪರ್ಧಿಸಿದ್ದರು. ಆದರೆ, ತಮ್ಮದೇ ಪಕ್ಷದವರ ಬೆದರಿಕೆಯಿಂದಾಗಿ ಅಲೇಕ್ಸ್ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ. ಇದೇ ಕ್ಷೇತ್ರದಲ್ಲಿ ಯುಡಿಎಫ್ನಿಂದ ಮಾಜಿ ಸಂಸದ ಪಿಕೆ ಕುನ್ಹಾಲಕುಟ್ಟಿ ಹಾಗೂ ಎಲ್ಡಿಎಫ್ನಿಂದ ಪಿ ಜೀಜಿ ಅವರು ಸ್ಪರ್ಧಿಸಿದ್ದಾರೆ.
ಈ ಚುನಾವಣೆಯಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ಎಸ್ಡಿಜೆಪಿ ಪಾರ್ಟಿ ಅಲೇಕ್ಸ್ನ್ನು ಚುನಾವಣೆಗೆ ನಿಲ್ಲಿಸಿದ್ದರಂತೆ. ಆದರೆ, ಅಲೇಕ್ಸ್ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಉಲ್ಟಾ ಹೊಡೆದಿರುವ ಪಾರ್ಟಿ, ಕಣದಿಂದ ಹಿಂದೆ ಸರಿಯುವಂತೆ ಹೇಳಿದ್ದಾರೆ. ಆದರೆ, ಅಲೇಕ್ಸ್ ಇದಕ್ಕೆ ಒಪ್ಪದಿದ್ದಾಗ ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಅಲ್ಲದೇ ಅವಳಿಗೆ ಅವಮಾನಕರ ಆಗುವ ರೀತಿಯಲ್ಲಿ ಭಿತ್ತಿಪತ್ರಗಳನ್ನು ಹಂಚಿದ್ದಾರಂತೆ.
ಕೇರಳದ ಮೊದಲ ಮಂಗಳಮುಖಿ ರೆಡಿಯೋ ಜಾಕಿಯಾಗಿರುವ ಅಲೇಕ್ಸ್, ಟಿವಿ ನಿರೂಪಕಿ ಹಾಗೇ ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಾರಂತೆ. ಇದೀಗ ತನ್ನದೇ ಪಾರ್ಟಿ ಬೇರೆಯವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ನನ್ನ ತೇಜೋವಧೆ ಮಾಡುತ್ತಿರುವುದರಿಂದ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಅಲೇಕ್ಸ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.