ಬೆಂಗಳೂರು: ( Sub-Registrar K. Manjudarshini suspended) ಕೆಂಗೇರಿ ಹೋಬಳಿಯ ಆಗರ ಗ್ರಾಮದ ಸರ್ವೆ ನಂ. 115ರಲ್ಲಿ ಬಿಡಿಎನ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆಗೆ ಭೂ-ಸ್ವಾಧೀನಗೊಂಡಿದ್ದ 4 ಎಕರೆ 38 ಗುಂಟೆ ಜಮೀನನ್ನು ನಿಯಮಬಾಹಿರವಾಗಿ ನೋಂದಾಯಿಸಿದ ಹಿನ್ನೆಲೆಯಲ್ಲಿ ಕೆಂಗೇರಿ ಉಪನೋಂದಣಾಧಿಕಾರಿ ಕೆ. ಮಂಜುದರ್ಶಿನಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಭೂ ಸ್ವಾಧೀನಗೊಂಡ ಜಮೀನನ್ನು ‘ಕಾವೇರಿ’ ತಂತ್ರಾಂಶದಲ್ಲಿ ನಮೂದಿಸಿದ್ದರೂ, ಕರ್ನಾಟಕ ಭೂಮಿ ಅಧಿನಿಯಮ 1991 ಮತ್ತು ನೋಂದಣಿ ಅಧಿನಿಯಮ 1908ರ ಕಲಂ 22(ಬಿ) ನಿಯಮ ಉಲ್ಲಂಘಿಸಿ 18.50 ಕೋಟಿ ರೂ. ಮೌಲ್ಯದ ಜಮೀನಿನ ಕ್ರಯಪತ್ರವನ್ನು ಕೆ. ಮಂಜುದರ್ಶಿನಿ ನೋಂದಾಯಿಸಿದ್ದಾರೆ ಎಂದು ಜಯನಗರದ ಜಿಲ್ಲಾನೋಂದಣಾಧಿಕಾರಿಗಳು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕೆ. ಮಂಜುದರ್ಶಿನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖೆ ಆಯುಕ್ತ ಎಂ.ಪಿ.ಮುಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.