ವಿಜಯವಾಣಿ ಸುದ್ದಿಜಾಲ ಪುತ್ತೂರು(ದ.ಕ.)
ಕ್ಯಾನ್ಸರ್ ಕಾರಕ ಎಂಬ ಆಪಾದನೆಗೆ ಗುರಿಯಾಗಿರುವ ಅಡಕೆಯಲ್ಲಿ ಔಷಧೀಯ ಗುಣಗಳಿವೆ ಎಂಬುದು ಪ್ರತಿ ಸಂಶೋಧನೆಗಳಲ್ಲಿ ದೃಢವಾಗುತ್ತಿದೆ. ಹಣ್ಣಡಕೆಯ ಸಾರವನ್ನು ಬಳಸಿ ತಯಾರಿಸುತ್ತಿರುವ ಸಾಬೂನು ಚರ್ಮ ರೋಗವನ್ನು ನಿವಾರಿಸುವ ಗುಣ ಹೊಂದಿದ್ದು, ಈ ಸಾಬೂನಿಗೆ ಪುತ್ತೂರಿನ ಉದ್ಯಮಿಯೊಬ್ಬರು ಪೇಟೆಂಟ್ ಪಡೆದುಕೊಂಡಿದ್ದಾರೆ.
ಪುತ್ತೂರು ಸಮೀಪದ ಕೆದಿಲದಲ್ಲಿರುವ ಹಾರ್ದಿಕ್ ಹರ್ಬಲ್ಸ್ ಸತ್ವಮ್ ಕೊಕೋರೇಕಾ ಹರ್ಬಲ್ ಬಾತಿಂಗ್ ಸೋಪ್ಗೆ ಭಾರತ ಸರ್ಕಾರದಿಂದ ಪೇಟೆಂಟ್ ಲಭಿಸಿದೆ. 2021 ನವೆಂಬರ್ನಲ್ಲಿ ಪ್ರಕ್ರಿಯೆ ಆರಂಭಿಸಿ ಅನೇಕ ಹಂತಗಳನ್ನು ಪೂರೈಸಿ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದು, ಭಾರತ ಸರ್ಕಾರದ ಹಕ್ಕುಸ್ವಾಮ್ಯ ಕಾರ್ಯಾಲಯದಿಂದ ಸೆ.13ರಂದು ಅಧಿಕೃತವಾಗಿ ಹಕ್ಕುಸ್ವಾಮ್ಯ ಲಭಿಸಿದೆ.
ವ್ಯರ್ಥವಾಗಿ ಹೋಗುವ ಅಡಕೆ ಸಿಪ್ಪೆಯಲ್ಲಿ ಚರ್ಮದ ಆರೋಗ್ಯ ಕಾಪಾಡುವ ಶಕ್ತಿಯಿದೆ ಎಂಬುದು ಸಂಶೋಧನೆ ಮೂಲಕ ದೃಢಪಟ್ಟಿದೆ. ಅಡಕೆಯ ವಿವಿಧ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಔಷಧೀಯ ಗುಣದ ಸಾಬೂನಿನ ಮೂಲಕ ಅಡಕೆ ಮೌಲ್ಯವರ್ಧನೆಗೆ ಮತ್ತಷ್ಟು ಬಲ ತುಂಬುವ ಕೆಲಸವಾಗಿದೆ.
ಸೋಪಿನಲ್ಲಿ ಏನಿದೆ?: ಅಡಕೆ ಹಣ್ಣಿನ ಸಿಪ್ಪೆಯ ರಸ, ತೆಂಗಿನ ಎಣ್ಣೆ, ಅಲೋವೆರಾ, ಸಾಗುವಾನಿ ಎಲೆ, ಅರಿಶಿಣ ಎಣ್ಣೆ, ಕೊತ್ತಂಬರಿ ಮತ್ತು ಲಾವಂಚದಂತಹ ಪ್ರಬಲ ಗಿಡಮೂಲಿಕೆಗಳ ಸಮೃದ್ಧ ಮಿಶ್ರಣದಿಂದ ಸಾಬೂನು ತಯಾರಿಸಲಾಗುತ್ತದೆ. ಪ್ರಕೃತಿಯ ಸತ್ವವನ್ನು ಬಳಸಿ ನೈಸರ್ಗಿಕ ಮತ್ತು ಪ್ರಯೋಜನಕಾರಿಯಾಗಿ ತ್ವಚೆಯ ರಕ್ಷಣೆ ಮಾಡುವುದು ಸಂಶೋಧನೆ ಮೂಲಕ ದೃಢಪಟ್ಟಿದೆ.
ವಿವಿಧ ಉತ್ಪನ್ನ: ಈಗಾಗಲೇ ಅಡಕೆಯಿಂದ ತಂಪು ಪಾನೀಯ, ಚಹಾ, ಕಾಫಿ, ಐಸ್ಕ್ರೀಂ, ಚಾಕಲೆಟ್ಗಳನ್ನು ತಯಾರಿಸಲಾಗುತ್ತಿದೆ. ಪೈಪ್ ಗಮ್ ಗಾಜುಗಳನ್ನು ತಯಾರಿಸುವ ಸಂಶೋಧನೆ ಯಶಸ್ಸು ಕಂಡಿದೆ. ಅಡಕೆ ಚೊಗರಿನಿಂದ ಬಣ್ಣ ತಯಾರಿಸಿ ಬಟ್ಟೆಗಳಿಗೆ ಬಳಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ತ್ವಚೆ ಮೇಲೆ ನೇರ ಪರಿಣಾಮ ಸತ್ವಮ್ ಕೊಕೋರೇಕಾ: ಗಿಡಮೂಲಿಕೆ ಸಾಬೂನು ತ್ವಚೆಯನ್ನು ಬಲಪಡಿಸುವ, ಸುಕ್ಕುಗಳನ್ನು ಕಡಿಮೆ ಮಾಡುವ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ವೈಟ್ಪ್ಯಾಚ್ ಅಥವಾ ಬಿಳಿಮಚ್ಚೆ(ಸಿಬ್ಬ)ಯ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ತುರಿಕೆ ನಿವಾರಿಸುತ್ತದೆ ಮತ್ತು ಗಾಯಗಳನ್ನು ಗುಣಪಡಿಸುತ್ತದೆ.
ಕೋವಿಡ್ ಸಮಯದಲ್ಲಿ ಅಡಕೆ ವಿಚಾರದಲ್ಲಿ ಸಂಶೋಧನೆಗೆ ಮುಂದಾಗಿದ್ದೆವು. ಬಾಲ್ಯದ ದಿನಗಳಲ್ಲಿ ಬೆವರಿನ ತುರಿಕೆಗೆ ಹಣ್ಣಡಕೆಯ ರಸವನ್ನು ಹಚ್ಚುತ್ತಿದ್ದರು ಮತ್ತು ಇದರಿಂದ ಪ್ರಯೋಜನ ಸಿಗುತ್ತಿತ್ತು. ಇದನ್ನು ಹೇಗೆ ಸಾಬೂನಾಗಿ ಪರಿವರ್ತಿಸಬಹುದೆಂಬ ಸಂಶೋಧನೆಗೆ ಮುಂದಾಗಿದ್ದೆವು. ಬದನಾಜೆ ಶಂಕರ ಭಟ್, ಡಾ.ಶ್ರೀಕುಮಾರ್ ಈಶ್ವರಮಂಗಲ ಸೇರಿ ವಿವಿಧ ಮಂದಿಯ ಮಾರ್ಗದರ್ಶನ ಪಡೆದು ಅಡಕೆ ಹಣ್ಣಿನ ಸಿಪ್ಪೆಯ ರಸವನ್ನು ಬಳಸಿಕೊಂಡು ಮೂರು ವರ್ಷಗಳಿಂದ ಸಾಬೂನು ತಯಾರಿಸುತ್ತಿದ್ದೇವೆ. | ಮುರಳೀಧರ ಕೆ.ಸಿಇಒ, ಹಾರ್ದಿಕ್ ಹರ್ಬಲ್ಸ್
ನವದೆಹಲಿ: ಭೂತಾನ್ನಿಂದ ಹಸಿ ಅಡಕೆ (ಫ್ರೆಶ್ ಗ್ರೀನ್ ಅರೆಕಾನಟ್) ಆಮದು ಮಾಡಿಕೊಳ್ಳಲು ಬುಧವಾರ ಅನುಮತಿ ನೀಡಲಾಗಿದೆ. ಕನಿಷ್ಠ ಆಮದು ದರ (ಎಂಐಪಿ) ವಿಧಿಸದೇ ಒಡಿಶಾದ ಹರಿತ್ಸರ್ ಮತ್ತು ಅಸ್ಸಾಂನ ದರಾಂಗಾ ಭೂ ಸುಂಕ ಕೇಂದ್ರಗಳ (ಲ್ಯಾಂಡ್ ಕಸ್ಟಮ್್ಸ ಸ್ಟೇಶನ್) ಮೂಲಕ ಆಮದು ಮಾಡಿಕೊಳ್ಳಲು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಸಮ್ಮತಿ ನೀಡಿದೆ. ಭೂತಾನ್ನಿಂದ ಎಂಐಪಿ ಇಲ್ಲದೆ ಪ್ರತಿ ವರ್ಷ 17 ಸಾವಿರ ಟನ್ ಹಸಿ ಅಡಕೆ ಆಮದಿಗೆ 2022ರ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಸ್ಥಳೀಯ ಅಡಕೆ ಬೆಳೆಗಾರರ ಹಿತರಕ್ಷಣೆ ದೃಷ್ಟಿಯಿಂದ 2017ರಲ್ಲಿ ಸರ್ಕಾರ ಪ್ರತಿ ಕೆಜಿಗೆ 251 ರೂ. ಎಂಐಪಿ ವಿಧಿಸಿತ್ತು. 2018ರಲ್ಲಿ ಕೆಜಿಗೆ 251ಕ್ಕಿಂತ ಹೆಚ್ಚಿನ ದರ ಇರುವ ಅಡಕೆ ಆಮದಿಗೆ ಮುಕ್ತ ಅವಕಾಶ ಕಲ್ಪಿಸಿತ್ತು.
ಹಸಿರು ಅಡಕೆ ಆಮದು ಆಗುವುದರಿಂದ ನಮ್ಮ ಅಡಕೆಗೆ ಯಾವುದೇ ಪರಿಣಾಮ ಆಗುವುದಿಲ್ಲ. ಕಳೆದ ಮೂರು ವರ್ಷದಿಂದ ಹಸಿರು ಅಡಕೆ ಬರುತ್ತಿದೆ. ಸರ್ಕಾರದ ಕೆಲವೊಂದು ರಾಜತಾಂತ್ರಿಕ ಕಾರಣಗಳಿಗಾಗಿ ಭೂತಾನ್ ಅಡಕೆ ಆಮದಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಇಲ್ಲಿನ ಅಡಕೆಗೆ ಯಾವುದೇ ಸಮಸ್ಯೆ ಇಲ್ಲ. ಕೃಷಿಕರು ಭಯಪಡುವ ಅಗತ್ಯ ಇಲ್ಲ. ಇಂಡೋನೇಷ್ಯಾ, ಶ್ರೀಲಂಕಾ ಅಡಕೆ ಕಳ್ಳದಾರಿಯಲ್ಲಿ ಬರದಂತೆ ಸರ್ಕಾರ ತಡೆಯೊಡ್ಡಬೇಕಾಗಿದೆ. | ಕಿಶೋರ್ ಕುಮಾರ್ ಕೊಡ್ಗಿ ಕ್ಯಾಂಪ್ಕೊ ಅಧ್ಯಕ್ಷ ಹಸಿರು ಅಡಕೆ ಆಮದಿನಿಂದ ಕರಿಗೋಟು ಮತ್ತು ಉಳ್ಳಿಗಡ್ಡೆ ಧಾರಣೆ ಮೇಲೆ ಕೊಂಚ ಪರಿಣಾಮ ಬೀರಬಹುದು. ಈ ಅಡಕೆ ಗುಟ್ಖಾ ತಯಾರಿಗೆ ಮಾತ್ರ ಬಳಸಲು ಸಾಧ್ಯ. ಭಾರತ ಮತ್ತು ಭೂತಾನ್ ಒಪ್ಪಂದ ಪ್ರಕಾರ ಅನುಮತಿ ನೀಡಿರಬಹುದು. | ಡಾ.ವಿಘ್ನೕಶ್ವರ ವಮುಡಿ ಮಾರುಕಟ್ಟೆ ತಜ್ಞರು ಭೂತಾನ್ನಿಂದ ಆಮದು ಮಾಡಿ ಕೊಳ್ಳುವ 17 ಸಾವಿರ ಟನ್ ಹಸಿ ಅಡಕೆಯನ್ನು ಸಂಸ್ಕರಣೆ ಮಾಡಿದರೆ 1-1.5 ಸಾವಿರ ಟನ್ ಒಣ ಅಡಕೆ ಸಿಗಬಹುದು. ಇದರಿಂದ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಕಳ್ಳಮಾರ್ಗದಲ್ಲಿ ಆಮದು ಸುಂಕ ತಪ್ಪಿಸಿ ದೇಶದೊಳಕ್ಕೆ ಬರುವ ಅಡಕೆಯಿಂದ ಅಪಾಯವಿದೆ. | ಎಚ್.ಎಸ್.ಮಂಜಪ್ಪ ರಾಜ್ಯ ಅಡಕೆ ಮಾರಾಟ ಸಹಕಾರ ಮಹಾಮಂಡಳದ ಅಧ್ಯಕ್ಷ