ಕೊಳ್ಳೇಗಾಲ : ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿವುಳ್ಳವರು ಆಗಿದ್ದರು, ಬೆಂಗಳೂರನ್ನು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ವಾಣಿಜ್ಯ ಹಾಗೂ ಪರಿಸರ ವಾತಾವರಣವುಳ್ಳ ರೀತಿಯಲ್ಲಿ ನಿರ್ಮಾಣ ಮಾಡಿದ್ದರು. ಅಂತೆಯೇ, ಇದೀಗ ಬೆಂಗಳೂರು ನಗರ ಇಡೀ ಪ್ರಪಂಚದಲ್ಲಿ ಶೈಕ್ಷಣಿಕವಾಗಿ, ವಾಣಿಜ್ಯವಾಗಿ ಬೆಳೆದಿದೆ. ಇಲ್ಲಿ ಅನೇಕ ದೇವಸ್ಥಾನಗಳು ಸಹ ನಿರ್ಮಾಣಗೊಂಡಿದೆ ಎಂದರು.
ಇಂದು ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಆಶಾಭಾವನೆಯಂತೆ ಬಿಗ್ ಬೆಂಗಳೂರು ವಿಸ್ತರಣೆಗೊಳಿಸಿದ್ದು, ಬಿಬಿಎಂಪಿಯಿಂದ ಈ ಬಾರಿ ವಿಶೇಷ ಅನುದಾನ ಬಿಡುಗಡೆ ಮಾಡಿ ಬೆಂಗಳೂರು ಸೇರಿದಂತೆ ರಾಜ್ಯಾದಂತಹ ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಅದೇ ರೀತಿ ಕೊಳ್ಳೇಗಾಲ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಜಯಂತಿ ಆಚರಿಸಲಾಗುತ್ತಿದೆ ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕುಣಗಳ್ಳಿ ಗ್ರಾಮದ ಶಿಕ್ಷಕ ಸತೀಶ್ ಅವರು ಕೆಂಪೇಗೌಡ ಅವರ ಕುರಿತು ಸವಿವರವಾಗಿ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಯಳಂದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಭು ಪ್ರಸಾದ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಾದೇಶ್, ಕಾರ್ಯದರ್ಶಿ ಸಿದ್ದಲಿಂಗೇಗೌಡ ಹಾಗೂ ನಿರ್ದೇಶಕರು, ಉಪವಿಭಾಗಾಧಿಕಾರಿ ಮಹೇಶ್, ತಹಸಿಲ್ದಾರ್ ಬಸವರಾಜು, ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ ಹಾಗೂ ಅಧಿಕಾರಿಗಳು ಇದ್ದರು.