ನ್ಯೂಸ್

ಅಮೆರಿಕ ಅಧ್ಯಕ್ಷರ ಮೆಗಾ ಸಮಾರಂಭಕ್ಕೆ "ಕೆಮ್ ಚೋ ಟ್ರಂಪ್" ಎಂದು ಹೆಸರು​: ಅದ್ಧೂರಿ ಕಾರ್ಯಕ್ರಮಕ್ಕೆ ಅಹಮದಾಬಾದ್​ ಸಜ್ಜು

ನವದೆಹಲಿ: ಭಾರತಕ್ಕೆ ಮೊದಲ ಬಾರಿಗೆ ಇದೇ ತಿಂಗಳ ಕೊನೆಯಲ್ಲಿ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಭಾರಿ ತಯಾರಿ ನಡೆದಿದೆ. ಟೆಕ್ಸಾಸ್​ನ ಹ್ಯೂಸ್ಟನ್​ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ 5 ತಿಂಗಳ ಬಳಿಕ ಮತ್ತೊಮ್ಮೆ ಉಭಯ ರಾಷ್ಟ್ರಗಳ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳಲು ಮಹಾ ವೇದಿಕೆಯೊಂದು ಸಜ್ಜಾಗುತ್ತಿದೆ.

ಟ್ರಂಪ್​ ಅವರು ಯುನೈಟೆಡ್​ ಸ್ಟೇಟ್ಸ್​ನ ಪ್ರಥಮ ಮಹಿಳೆ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್​ ಜತೆ ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಫೆ. 24ರಂದು ಭಾರತಕ್ಕೆ ಬಂದಿಳಿಯಲಿದ್ದಾರೆ. ಬಳಿಕ ನವದೆಹಲಿ ಮತ್ತು ಪ್ರಧಾನಿ ಮೋದಿ ತವರು ಗುಜರಾತಿನ ಅಹಮದಾಬಾದ್​ ಪ್ರವಾಸ ಮಾಡಲಿದ್ದಾರೆ.

ಹೇಗಿದ್ದೀರಿ ಟ್ರಂಪ್​?

ಅಮೆರಿಕದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ರೀತಿಯಲ್ಲೇ ಆಯೋಜನೆಗೊಂಡಿರುವ ಜಂಟಿ ಸಾರ್ವಜನಿಕ ಸಭೆಯಲ್ಲಿ ಉಭಯ ನಾಯಕರು ಭಾಗಿಯಾಗಲಿದ್ದಾರೆ. ಈ ಮೆಗಾ ಸಮಾರಂಭಕ್ಕೆ "ಕೆಮ್ ಚೋ ಟ್ರಂಪ್​" ಎಂದು ಹೆಸರಿಸಲಾಗಿದೆ. ಅಂದಹಾಗೆ ಕೆಮ್​ ಚೋ ಎಂಬುದು ಗುಜರಾತಿ ಭಾಷೆಯಾಗಿದ್ದು, "ಹೇಗಿದ್ದೀರಿ ಟ್ರಂಪ್​" ಎನ್ನುವ ಅರ್ಥ ಕೊಡುತ್ತದೆ. ಇದು ಹೌಡಿ ಮೋದಿ ಪದದ ಸಮನಾರ್ಥವಾಗಿದೆ.

ಸಮಾರಂಭಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಸಜ್ಜು

ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದ್ಧೂರಿ ಸಮಾರಂಭವು ಅಹಮದಾಬಾದ್​ನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಸರ್ದಾರ್​ ಪಟೇಲ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ವಿಶ್ವದಲ್ಲೇ ಬಹುದೊಡ್ಡ ಸ್ಟೇಡಿಯಂ ಅನ್ನೋ ಹೆಸರಿಗೆ ಪಾತ್ರವಾಗಿದ್ದು, ಸುಮಾರು 1.10 ಲಕ್ಷ ಆಸನ ವ್ಯವಸ್ಥೆಯನ್ನು ಹೊಂದಿದೆ. ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂಗಿಂತಲೂ ಬಹುದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿದೆ. ಈ ಸ್ಟೇಡಿಯಂ ಅನ್ನು ಟ್ರಂಪ್​ ಉದ್ಘಾಟನೆ ಮಾಡಲಿದ್ದಾರೆ.

ಹೌಡಿ ಮೋದಿ ಕಾರ್ಯಕ್ರಮದ ಮೆಲಕು

ಈ ಹಿಂದೆ ಅಮೆರಿಕದಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಹ್ಯೂಸ್ಟನ್​ನ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಕಳೆದ ಸೆಪ್ಟೆಂಬರ್​ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅಮೆರಿಕ ಮಣ್ಣಿನಲ್ಲಿ ಆಯ್ಕೆಯಾದ ವಿದೇಶಿ ನಾಯಕರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇಂಡಿಯನ್​-ಅಮೆರಿಕನ್ನರು ಭಾರಿ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದರು.

ಬೃಹತ್​ ರೋಡ್​ ಶೋ

ಹೇಗಿದ್ದೀರಿ ಟ್ರಂಪ್​ ಕಾರ್ಯಕ್ರಮಕ್ಕೂ ಮುನ್ನ ಟ್ರಂಪ್​, ಪ್ರಧಾನಿ ಮೋದಿಯೊಂದಿಗೆ ರೋಡ್​ಶೋನಲ್ಲಿ ಭಾಗವಹಿಸಲಿದ್ದಾರೆ. ಉಭಯ ನಾಯಕರು ಸಬರಮತಿ ಆಶ್ರಮಕ್ಕೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲಿದ್ದಾರೆ. ಅಹಮದಾಬಾದ್​ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೂ 10 ಕಿ.ಮೀ ಉದ್ದದ ರೋಡ್​ ಶೋ ನಡೆಯಲಿದೆ. (ಏಜೆನ್ಸೀಸ್​)