ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ  
ನ್ಯೂಸ್

ಕೆಳದಿ ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿವಿ ಘಟಿಕೋತ್ಸವ 22ಕ್ಕೆ

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನ್ನು ಜ.22ರ ಮಧ್ಯಾಹ್ನ 2ಕ್ಕೆ ಇರುವಕ್ಕಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಇರುವಕ್ಕಿ ಕ್ಯಾಂಪಸ್‌ನ ಅಭಿವೃದ್ಧಿಗೆ ಸಹಕಾರ ನೀಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಈ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯಲಿರುವ ಮೂರನೇ ಸಾಧಕ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

ವಿವಿಯ ಕುಲಾಧಿಪತಿ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಸಹ ಕುಲಾಧಿಪತಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉಪಸ್ಥಿತರಿರುವರು. ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಎಲ್.ಎಸ್.ಶಶಿಧರ ಘಟಿಕೋತ್ಸವ ಭಾಷಣ ಮಾಡುವರು ಎಂದು ವಿವಿಯ ಕುಲಪತಿ ಡಾ. ಆರ್.ಸಿ.ಜಗದೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿವಿಧ ವಿಷಯಗಳಲ್ಲಿ ವ್ಯಾಸಂಗ ಮಾಡಿದ 994 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. 793 ಸ್ನಾತಕ ಪದವೀಧರರು ಈ ಬಾರಿಯ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲಿದ್ದಾರೆ. ಕೃಷಿ, ತೋಟಗಾರಿಕೆ, ಅರಣ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ 176 ವಿದ್ಯಾರ್ಥಿಗಳಿಗೆ ಪದವಿ ಹಾಗೂ 25 ಮಂದಿಗೆ ಪಿಎಚ್.ಡಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ರ‌್ಯಾಂಕ್ ಗಳಿಸಿದ 17 ಪದವಿ ವಿದ್ಯಾರ್ಥಿಗಳಿಗೆ 31 ಚಿನ್ನದ ಪದಕಗಳು, 28 ಸ್ನಾತಕೋತ್ತರ ಪದವೀಧರರಿಗೆ 22 ಚಿನ್ನದ ಪದಕಗಳು, ಪಿಎಚ್.ಡಿ ಪದವಿ ಪಡೆದ 10 ವಿದ್ಯಾರ್ಥಿಗಳಿಗೆ 12 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದರು.

ಕುಲಸಚಿವ ಡಾ. ಕೆ.ಸಿ.ಶಶಿಧರ, ವಿಸ್ತರಣಾ ನಿರ್ದೇಶಕ ಕೆ.ಟಿ.ಗುರುಮೂರ್ತಿ, ಸಂಶೋಧನಾ ನಿರ್ದೇಶಕ ಡಾ. ದುಷ್ಯಂತ್, ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾ ನಾಯ್ಕ, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ನಾರಾಯಣ ಎಸ್. ಮಾವರ್ಕರ್, ಗ್ರಂಥಪಾಲಕ ಶಿವಣ್ಣ ಸುದ್ದಿಗೋಷ್ಠಿಯಲ್ಲಿದ್ದರು.