ನವದೆಹಲಿ: ಅಮರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನೇದಿನೆ ಹೆಚ್ಚುತ್ತಿದ್ದು ಮಧ್ಯ ಪ್ರಾಚ್ಯವನ್ನು ಯುದ್ಧ ಭೀತಿ ಆವರಿಸಿದೆ.
ವಾರದ ಹಿಂದೆ ಅಮೆರಿಕ ಸೇನೆ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಏರ್ಸ್ಟ್ರೈಕ್ ನಡೆಸಿ ಇರಾನ್ ಸೇನಾ ಜನರಲ್ ಖಾಸಿಮ್ ಸುಲೈಮಾನಿ ಅವರನ್ನು ಹತ್ಯೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಇಂದು ಇರಾಕ್ನ ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲದೆ ಅಮರಿಕದ 80 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಗಲ್ಫ್ ದೇಶಗಳಲ್ಲಿರುವ 10 ಮಿಲಿಯನ್ ಭಾರತೀಯರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು ಗಲ್ಫ್ ದೇಶದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗೆ ಕೂಡಲೆ ಯೋಜನೆ ರೂಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರನ್ನು ಒತ್ತಾಯಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ ಯಾವಾಗ ಬೇಕಾದರೂ ದಕ್ಷಿಣಕ್ಕೆ ಪಸರಿಸಬಹುದು. ಇರಾನ್-ಅಮೆರಿಕ ನಡುವೆ ಯುದ್ಧ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಗಲ್ಫ್ ದೇಶಗಳಲ್ಲಿ ಸುಮಾರು 10 ಮಿಲಿಯನ್ ಭಾರತೀಯರು ನೆಲೆಸಿದ್ದಾರೆ. ಅವರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಈಗಲೇ ಕ್ರಮ ಕೈಗೊಳ್ಳಿ. ಅದಕ್ಕೊಂದು ವ್ಯವಸ್ಥಿತ ಯೋಜನೆ ರೂಪಿಸಿ ಎಂದು ಅಮರಿಂದರ್ ಸಿಂಗ್ ಟ್ವಿಟರ್ನಲ್ಲಿ ಒತ್ತಾಯಿಸಿದ್ದಾರೆ.(ಏಜೆನ್ಸೀಸ್)