ಬೆಂಗಳೂರು ಸಿಇಟಿ ಅರ್ಜಿ ಭರ್ತಿ, ಆಪ್ಷನ್ ದಾಖಲು, ಸೀಟು ಹಂಚಿಕೆ ಪ್ರಕ್ರಿಯೆ ಸೇರಿ ಪ್ರತಿಹಂತದ ಮಾಹಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ’ಕೆಇಎ ವಿಕಾಸನ’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದೆ.
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಶುಕ್ರವಾರ ಚಾನೆಲ್‌ನಲ್ಲಿ ಮಾತನಾಡುವುದರ ಮೂಲಕ ಚಾಲನೆ ನೀಡಿದರು. ಆರಂಭಿಕ ಮಾತುಗಳಲ್ಲಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಸಿಇಟಿ ಪ್ರಕ್ರಿಯೆ ಪೂರ್ಣ ವಿವರಗಳನ್ನು ಹಂತಹಂತವಾಗಿ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಅವರು ಹೇಳಿದರು.
ಕೇವಲ ಸಿಇಟಿ ಪ್ರಕಿಯೆಗೆ ಮಾತ್ರ ಸೀಮಿತವಾಗದೆ, ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲೂ ಈ ಚಾನೆಲ್ ಮೂಲಕ ಮಾಹಿತಿಯನ್ನು ಬಿತ್ತರಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಶುಕ್ರವಾರವೇ 33 ಸಾವಿರ ಫಾಲೋವರ್ಸ್ ಆಗಿದ್ದು, ಮುಂದಿನ ದಿನಗಳಲ್ಲಿ ಇತರ ಸಾಮಾಜಿಕ ಜಾಲ ತಾಣಗಳ ಮೂಲಕವೂ ಮಾಹಿತಿ ಹಂಚಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.