ನ್ಯೂಸ್

ವಾಮಮಾರ್ಗದ ಎನ್‌ಆರ್‌ಐ ಸೀಟಿಗೆ ಕಡಿವಾಣ ಹಾಕಿದ ಕೆಇಎ: ಹೊಸ ನಿಯಮವೇನು?

ಎನ್.ಎಲ್. ಶಿವಮಾದು

ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸೀಟು ಪಡೆಯುತ್ತಿದ್ದ ಅನಿವಾಸಿ ಭಾರತೀಯ (ಎನ್‌ಆರ್‌ಐ) ಅಭ್ಯರ್ಥಿಗಳಿಗೆ ಈ ವರ್ಷ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ವರ್ಷದಿಂದ ಸೀಟು ಪಡೆಲು ಪ್ರಾಯೋಜಕತ್ವ ನೀಡುವವರು ತಾವು ನೆಲೆಸಿರುವ ದೇಶದಿಂದಲೇ ನೇರವಾಗಿ ಶುಲ್ಕವನ್ನು ಪಾವತಿಸಬೇಕೆಂಬ ನಿಯಮವನ್ನು ಜಾರಿಗೊಳಿಸಿದೆ.

ಈ ನಿಯಮದಿಂದ ಹಿಂದಿನ ವರ್ಷದವರೆಗೂ ಎನ್‌ಆರ್‌ಐ ಹೆಸರೇಳಿ ಇಲ್ಲಿರುವವರೇ ಸೀಟುಗಳನ್ನು ಪಡೆಯುತ್ತಿದ್ದರು. ಅಲ್ಲದೆ, ಶುಲ್ಕವನ್ನು ಕೂಡ ಭಾರತೀಯ ಕರೆನ್ಸಿಯಲ್ಲಿಯೇ ಪಾವತಿಸುತ್ತಿದ್ದ ಕ್ರಮಗಳಿಗೆ ಬ್ರೇಕ್ ಬೀಳಲಿದೆ.

ಕಡಿವಾಣಕ್ಕೆ ಕಾರಣಗಳೇನು?

ಸಿಇಟಿಯಲ್ಲಿ ಕಡಿಮೆ ರ‌್ಯಾಂಕ್ ಹೊಂದಿರುವವರು ಎನ್‌ಆರ್‌ಐ ಕೋಟಾದಡಿ ಸೀಟುಗಳನ್ನು ಪಡೆಯುತ್ತಿದ್ದರು. ಇದರಿಂದ ಉಳಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಮತ್ತು ಎನ್‌ಆರ್‌ಐ ಕೋಟಾ ಸೀಟುಗಳ ನಿಯಮಗಳನ್ನು ಸಹ ಉಲ್ಲಂಸಿದಂತಾಗುತ್ತದೆ ಎಂಬ ಕಾರಣದಿಂದ ನಿಯಮಗಳನ್ನು ಕಠೀಣಗೊಳಿಸಿದೆ.

ಹೊಸ ನಿಯಮಗಳೇನು?

ಹೊಸ ನಿಯಮಗಳ ಪ್ರಕಾರ ಯಾವ ದೇಶದಲ್ಲಿ ನೆಲೆಸಿರುತ್ತಾರೋ ಅಲ್ಲಿಂದಲೇ ನೇರವಾಗಿ ಶುಲ್ಕ ಪಾವತಿಸಬೇಕು. ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬ್ಯಾಂಕ್ ಖಾತೆಯೊಂದನ್ನು ಸಹ ತೆರೆದಿದೆ. ವಿದೇಶಗಳಿಂದ ಪಾವತಿಯಾದ ಶುಲ್ಕದ ಮೊತ್ತವನ್ನು ರೂಪಾಯಿಗೆ ಬದಲಾಯಿಸಿಕೊಡಲು ಸಹ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕವೂ ನೀಡಲು ಸಹ ಕ್ರಮ ವಹಿಸಲಾಗಿದೆ. ಆದರೆ, ಸ್ಥಳೀಯವಾಗಿ ಪಾವತಿಸಿದರೆ ಅದನ್ನು ಪರಿಗಣಿಸುವುದಿಲ್ಲ ಎನ್ನುತ್ತಾರೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ.

ಪ್ರಾಯೋಜಕತ್ವ ನೀಡುವವರು ಸೀಟು ಪಡೆದುಕೊಂಡಿರುವವರಿಗೆ ಇರುವ ಸಂಬಂಧದ ವಂಶವೃಕ್ಷ ಪ್ರಮಾಣಪತ್ರವನ್ನು ನೀಡಬೇಕು. ಇದನ್ನು ಸ್ಥಳೀಯ ತಹಶೀಲ್ದಾರ್ ಅವರಿಗೆ ದೃಢೀಕರಿಸಿರಬೇಕು. ಇಲ್ಲವಾದಲ್ಲಿ ಸೀಟುಗಳು ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎನ್‌ಆರ್‌ಐ ಕೊಟಾ ದೋಖಾ ಹೇಗೆ?

ರಾಜ್ಯದಲ್ಲಿ ನೆಲೆಸಿರುವವರು ಅವರ ಸಂಬಂಧಿಕರು ಯಾರಾದರೊಬ್ಬರು ವಿದೇಶಗಳಲ್ಲಿ ನೆಲೆಸಿದ್ದರೆ ಅವರ ಹೆಸರಿನಲ್ಲಿ ರಾಜ್ಯದಲ್ಲಿ ಸಿಇಟಿ ಮೂಲಕ ಸೀಟು ಪಡೆಯುತ್ತಿದ್ದರು. ಎನ್‌ಆರ್‌ಐ ಕೋಟಾದಡಿ ಶೇ.5 ಸೀಟುಗಳು ಲಭ್ಯವಿವೆ. ಕಡಿಮೆ ರ‌್ಯಾಂಕ್ ಬಂದಿದ್ದರೆ, ಎನ್‌ಆರ್‌ಐ ಕೋಟಾದಡಿ ಸೀಟಿಗೆ ಮುಂದಾಗುತ್ತಿದ್ದರು. ತಮ್ಮವರಿಗೆ ಒಂದು ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿ ಇಲ್ಲಿಯೇ ಶುಲ್ಕ ಪಾವತಿಸುತ್ತಿದ್ದರು.

ಆದರೆ, ಈಗ ವಂಶವೃಕ್ಷ ಮತ್ತು ನೆಲೆಸಿರುವವರು ಆಯಾ ದೇಶಗಳ ಕರೆನ್ಸಿಯಲ್ಲಿಯೇ ಶುಲ್ಕ ಪಾವತಿಸಬೇಕಿದೆ. ಈ ಕಾರಣದಿಂದ ಸರ್ಕಾರವನ್ನು ಯಾಮಾರಿಸುವುದು ಕಷ್ಟದ ಕೆಲಸವಾಗಲಿದೆ. ಕಳೆದ ವರ್ಷ 500 ಮಂದಿ ಎನ್‌ಆರ್‌ಐ ಕೋಟಾ ಸೀಟಿಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 320 ಮಂದಿ ಸೀಟು ಪಡೆದಿದ್ದರು. ದಾಖಲಾತಿ ಪರಿಶೀಲನೆ ವೇಳೆ 14 ಮಂದಿ ದಾಖಲಾತಿಗಳು ನಕಲು ಎಂದು ಪತ್ತೆಯಾಗಿತ್ತು.

ಎನ್‌ಆರ್‌ಐ ಕೋಟಾ ಸೀಟುಗಳ ನಿಯಮವನ್ನು ಬದಲಾವಣೆ ಮಾಡಿರುವ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ಅಂತಿಮವಾಗಿ ಸರ್ಕಾರವೇ ನಿರ್ಣಯ ಕೈಗೊಳ್ಳಲಿದೆ. - ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ