ನವದೆಹಲಿ: ಕಾಂಗ್ರೆಸ್ ಸಂಸದ ಮತ್ತು ಹಿರಿಯ ನಾಯಕ ಶಶಿ ತರೂರ್ ಇತ್ತೀಚೆಗೆ ವಿದೇಶಿ ಮಾಧ್ಯಮವೊಂದಕ್ಕೆ ಭಾರತದ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಬರೆದ ಲೇಖನದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್(K C Venugopal) ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಯನ್ನು ನೀಡುವ ಜನರ ಬಗ್ಗೆ ವಿಷಾದವಿದೆ. ಈ ಬಗ್ಗೆ ವಿವರಣೆ ನೀಡುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಪ್ರಾಜೆಕ್ಟ್ ಸಿಂಡಿಕೇಟ್‌ಗೆ ಲೇಖನ ಬರೆದಿದ್ದ ಶಶಿ ತರೂರ್, ಪಕ್ಷಾತೀತ ವಂಶಪಾರಂಪರ್ಯ ರಾಜಕೀಯವು ಭಾರತೀಯ ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆ ಒಡ್ಡುತ್ತದೆ. ಅದನ್ನು ಅರ್ಹತೆಯ ಆಧಾರದ ಮೇಲೆ ವಿನಿಮಯ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ವಾದಿಸಿದ್ದರು.
ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಕೆ.ಸಿ.ವೇಣುಗೋಪಾಲ್, ನೆಹರು-ಗಾಂಧಿ ಕುಟುಂಬವನ್ನು ಸಮರ್ಥಿಸಿಕೊಂಡಿದ್ದು, ಅವರು ದೇಶಕ್ಕಾಗಿ ಅಪಾರ ತ್ಯಾಗಗಳನ್ನು ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಿದವರ ಬಗ್ಗೆ ನನಗೆ ವಿಷಾದವಿದೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಗಾಂಧಿ ಕುಟುಂಬದವರು ಪ್ರಧಾನಿಯಾಗುವ ಅವಕಾಶವನ್ನೂ ನಿರಾಕರಿಸಿದ್ದಾರೆ. ಇದನ್ನು ಕುಟುಂಬ ಆಡಳಿತ ಎಂದು ಕರೆಯುವುದನ್ನು ಸಮರ್ಥಿಸಲಾಗಲ್ಲ ಎಂದು ತಿಳಿಸಿದ್ದಾರೆ.
ಸಂಸದ ಶಶಿ ತರೂರ್ ಅವರು ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅವರು ಕಾರಣವನ್ನು ನೀಡಬೇಕು ಎಂದು ಹೇಳಿದ್ದಾರೆ.
ಸಂಸದ ಶಶಿ ತರೂರ್ ಬರೆದಿದ್ದ ಲೇಖನದಲ್ಲೇನಿತ್ತು?
ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಪ್ರಾಜೆಕ್ಟ್ ಸಿಂಡಿಕೇಟ್‌ಗೆ, ‘ಭಾರತೀಯ ರಾಜಕೀಯವು ಒಂದು ಕುಟುಂಬ ವ್ಯವಹಾರ ಎಂಬ ಶೀರ್ಷಿಕೆಯ ತಮ್ಮ ಲೇಖನದಲ್ಲಿ ತರೂರ್, ರಾಜಕೀಯ ಅಧಿಕಾರವು ಸಾಮರ್ಥ್ಯ, ಬದ್ದತೆ ಹಾಗೂ ತಳಮಟ್ಟದಿಂದ ಕೂಡಿರದೇ ವಂಶಪಾರಂಪರ್ಯ ವ್ಯಕ್ತಿಗಳಿಂದ ನಿರ್ಧರಿಸಲ್ಪಟ್ಟರೆ ಆಡಳಿತದ ಗುಣಮಟ್ಟ ಹಾಳಾಗುತ್ತದೆ. ನೆಹರು-ಗಾಂಧಿ ಕುಟುಂಬದ ಪ್ರಭಾವವು ರಾಜಕೀಯ ಉದ್ಯೋಗವು ಜನ್ಮಸಿದ್ಧ ಹಕ್ಕು ಎಂಬ ಕಲ್ಪನೆಯನ್ನು ಗಟ್ಟಿಗೊಳಿಸಿದೆ ಎಂದು ಹೇಳಿದ್ದರು.
ಭಾರತದ ರಾಜಕೀಯ ಪಕ್ಷಗಳು ಕೆಲವು ಅಪವಾದಗಳನ್ನು ಹೊರತುಪಡಿಸಿ, ಹೆಚ್ಚಾಗಿ ವ್ಯಕ್ತಿತ್ವ ಆಧಾರಿತವಾಗಿವೆ. ಭಾರತದ ರಾಜಕಾರಣದಲ್ಲಿ ದಶಕಗಳಿಂದ ಒಂದು ಕುಟುಂಬವು ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ನೆಹರು-ಗಾಂಧಿ ರಾಜಕೀಯ ಪ್ರಭಾವವು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದೊಂದಿಗೆ ಸಂಬಂಧ ಹೊಂದಿದೆ. ಆದರೆ ರಾಜಕೀಯ ನಾಯಕತ್ವವು ಜನ್ಮಸಿದ್ಧ ಹಕ್ಕು ಎಂಬುದನ್ನು ಅದು ಗಟ್ಟಿಗೊಳಿಸಿದೆ. ಈ ಕಲ್ಪನೆಯು ದೇಶದ ಪ್ರತಿಯೊಂದು ಪಕ್ಷದಲ್ಲಿ, ಪ್ರತಿಯೊಂದು ಪ್ರದೇಶದಲ್ಲಿ ಮತ್ತು ಪ್ರತಿಯೊಂದು ಹಂತದಲ್ಲೂ ವ್ಯಾಪಿಸಿದೆ ಎಂದು ಪ್ರತಿಪಾದಿಸಿದ್ದರು. (ಏಜೆನ್ಸೀಸ್)