ನ್ಯೂಸ್

ಕೆಸಿಆರ್​ ಪುತ್ರಿ ಅಮಾನತು ವಿಚಾರ; ಬಿಆರ್​ಎಸ್​ ಪಕ್ಷ ಮತ್ತು ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಕವಿತಾ| K Kavitha

K Kavitha: ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆ ತೆಲಂಗಾಣದ ಭಾರತ ರಾಷ್ಟ್ರ ಸಮಿತಿ(ಬಿಆರ್​ಎಸ್)​ ಪಕ್ಷದಿಂದ ಅಮಾನತುಗೊಂಡಿದ್ದ ಕೆಸಿಆರ್​ ಪುತ್ರಿ ಕೆ.ಕವಿತಾ, ಇಂದು ಬುಧವಾರ (ಸೆ.03) ಸುದ್ದಿಗೋಷ್ಠಿ ನಡೆಸಿ ಬಿಆರ್​ಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಈ ಕುರಿತು ಹೈದರಾಬಾದ್​ನಲ್ಲಿ ಮಾತನಾಡಿರುವ ಅವರು, ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿರಲಿಲ್ಲ. ಕಲ್ವಕುಂಟ್ಲ ಕುಟುಂಬ ಮತ್ತು ಬಿಆರ್‌ಎಸ್‌ನ್ನು ಒಡೆಯಲು ಷಡ್ಯಂತ್ರ ನಡೆದಿದೆ. ಪಕ್ಷದ ಕೆಲವು ನಾಯಕರು ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ಪ್ರಾಮಾಣಿಕತೆ ಸಾಬೀತು ಪಡಿಸಲು ಮತ್ತು ಸ್ವಾಭಿಮಾನವನ್ನು ರಕ್ಷಿಸಿಕೊಳ್ಳಲು ಬಿಆರ್​ಎಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

ತಮ್ಮ ಸೋದರ ಸಂಬಂಧಿಗಳಾದ ಮಾಜಿ ಸಚಿವ ಹರೀಶ್ ರಾವ್ ಮತ್ತು ಸಂತೋಷ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ ಕೆ.ಕವಿತಾ, ಹರೀಶ್ ರಾವ್ ಅವರು ಸಿಎಂ ರೇವಂತ್ ರೆಡ್ಡಿಯೊಂದಿಗೆ ಒಡಗೂಡಿ ನಮ್ಮ ಕುಟುಂಬವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ನಮ್ಮ ತಂದೆಯ ಯಾವುದೇ ಪಾತ್ರವಿಲ್ಲ. ಆದರೆ ರೇವಂತ್ ರೆಡ್ಡಿ ನನ್ನ ಕುಟುಂಬ ಸದಸ್ಯರಾದ ಕೆಟಿಆರ್ ಮತ್ತು ಕೆಸಿಆರ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಹರೀಶ್ ರಾವ್ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಯೋಜನೆ ಪ್ರಾರಂಭವಾದಾಗ, ಹರೀಶ್ ರಾವ್ ನೀರಾವರಿ ಸಚಿವರಾಗಿದ್ದರು, ಆದರೆ ಈ ಬಗ್ಗೆ ರೇವಂತ್ ರೆಡ್ಡಿ ಏನು ಮಾತನಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕೆಸಿಆರ್​ ಸಿಬಿಐ ತನಿಖೆ ಎದುರಿಸುವ ಸ್ಥಿತಿ ಬಂದಿದೆ ಅಂದ್ರೆ ಅದಕ್ಕೆ ಕಾರಣ ಹರೀಶ್ ರಾವ್ ಮತ್ತು ಸಂತೋಷ್ ರಾವ್ ಎಂದು ಆರೋಪಿಸಿದ ಅವರು, ಕೆಸಿಆರ್ ನಿಷ್ಕಳಂಕರಾಗಿ ಪ್ರಕರಣದಿಂದ ಹೊರ ಬರುತ್ತಾರೆ ಎಂದು ತಿಳಿಸಿದರು. ಇದೇ ವೇಳೆ ಸಹೋದರ ಬಿಆರ್​ಎಸ್​ ಪಕ್ಷದ ಕಾರ್ಯಾಧ್ಯಕ್ಷ ಕೆಟಿಆರ್ ಅವರಿ​ಗೆ ಸಲಹೆ ನೀಡಿದ ಕವಿತಾ, ಪಕ್ಷದಲ್ಲಿ ನನ್ನ ವಿರುದ್ಧದುರುದ್ದೇಶಪೂರಿತ ಅಭಿಯಾನ ಆರಂಭವಾದಾಗ ನನಗೆ ನೀವು ಬೆಂಬಲ ನೀಡಲಿಲ್ಲ. ಹರೀಶ್ ರಾವ್ ಅವರ ಪಿತೂರಿಗಳ  ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿಇಡಿಯಿಂದ ಬಂಧನಕ್ಕೊಳಗಾಗಿದ್ದ ಕೆ.ಕವಿತಾ, ಬಳಿಕ ರಿಲೀಸ್ ಆಗಿದ್ದರು. ಈ ವೇಳೆ ಬಿಜೆಪಿಯೊಂದಿಗೆ ಬಿಆರ್​​ಎಸ್​ ಅನ್ನು ವಿಲೀನ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಮತ್ತು ವಿಲೀನಕ್ಕೆ ವಿರೋಧಿಸಿದ್ದರು. ಕವಿತಾ ಅವರ ರಾಜೀನಾಮೆಯು ಬಿಆರ್‌ಎಸ್ ಮತ್ತು ಕೆಸಿಆರ್​ ಕುಟುಂಬದೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ಬಹಿರಂಗ ಪಡಿಸಿದೆ. (ಏಜೆನ್ಸೀಸ್)