ನ್ಯೂಸ್

ಕೆಸಿ ವ್ಯಾಲಿ ವಿರೋಧಿಸಿತ್ತು ಜೆಡಿಎಸ್: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಮಾಲೂರು : ನಾನು ಮುಖ್ಯಮಂತ್ರಿಯಾಗಿದ್ದಾಗ ಮಣ್ಣಿನ ಮಕ್ಕಳು ಕೆಸಿ ವ್ಯಾಲಿ ವಿಷಪೂರಿತ ನೀರು ಎಂದು ಯೋಜನೆಗೆ ವಿರೋಧಿಸಿದ್ದರು ಎಂದು ಜೆಡಿಎಸ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ದೊಡ್ಡಶಿವಾರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನದಿ-ನಾಲೆಗಳಿಲ್ಲದೆ ಕೃಷಿಗೆ ರೈತರು 1600 ಅಡಿ ಆಳದಿಂದ ಕೊಳವೆಬಾವಿ ನೀರು ಬಳಸಿ ವ್ಯವಸಾಯ ಮಾಡುತ್ತಿದ್ದರು. ಬೆಂಗಳೂರಿನಿಂದ ತಮಿಳುನಾಡಿಗೆ ಹರಿಯುತ್ತಿದ್ದ ಕೊಳಚೆ ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸಿದರೆ ಕೆರೆಗಳು ತುಂಬಿ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದು 2 ಜಿಲ್ಲೆಗಳ ಶಾಸಕರು ಕಾಂಗ್ರೆಸ್ ಸರ್ಕಾರವಿದ್ದಾಗ ಮನವಿ ಮಾಡಿದ್ದರು.

ಆಗ ನಾನು ತಜ್ಞರ ಸಲಹೆ ಪಡೆದು ಯೋಜನೆ ರೂಪಿಸಲು ಮುಂದಾದಾಗ ಜೆಡಿಎಸ್ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಆದರೂ ಕೆಸಿ ವ್ಯಾಲಿ ಯೋಜನೆಗೆ 1400 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿದ್ದು, ಹೆಬ್ಬಾಳ ಹಾಗೂ ನಾಗವಾರ ಯೋಜನೆಗೆ 600 ಕೋಟಿ ರೂ. ಸೇರಿ ಒಟ್ಟು 2 ಜಿಲ್ಲೆಗಳಿಗೆ 2 ಸಾವಿರ ಕೋಟಿ ರೂಗಳನ್ನು ನನ್ನ ಸರ್ಕಾರದಲ್ಲಿ ನೀಡಿದ್ದೇನೆ ಎಂದರು. ಕೋಲಾರ ಜಿಲ್ಲೆಯ 134 ಕೆರೆ, ಮಾಲೂರು ತಾಲೂಕಿನ 12 ಕೆರೆಗಳಿಗೆ ಈಗಾಗಲೆ ಕೆಸಿ ವ್ಯಾಲಿ ನೀರು ಹರಿದಿದ್ದು, ನಾನು ದೊಡ್ಡಶಿವಾರ ಕೆರೆಗೆ ಬಾಗಿನ ಅರ್ಪಿಸಿರುವುದು ಸಂತೋಷವಾಗುತ್ತಿದೆ ಎಂದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಕೊಳವೆಬಾವಿ ಹಾಗೂ ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಕೆಸಿ ವ್ಯಾಲಿ ಯೋಜನೆಗೆ 1400 ಕೋಟಿ ರೂ. ನೀಡಿದ್ದರಿಂದ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿದೆ ಎಂದರು.

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಜಿ ಉಪಸಭಾಪತಿ ವಿ.ಆರ್.ಸುದರ್ಶನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ, ಪುರಸಭೆ ಅಧ್ಯಕ್ಷ ಮುರಳೀಧರ್, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಎಸ್.ವಿ.ಗೋವರ್ದನ್‌ರೆಡ್ಡಿ, ಮಾಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ.ಮಧುಸೂದನ್, ವಿಜಯನರಸಿಂಹ, ಮಾಸ್ತಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮೀಮೋಹನ್‌ಸಿಂಗ್, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಇದ್ದರು.

ಎತ್ತ್ತಿನಹೊಳೆಗೆ 13 ಸಾವಿರ ಕೋಟಿ: ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ನೀಡಿದ್ದೇನೆ. ಕೆಸಿ ವ್ಯಾಲಿ ನೀರಿನಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೃಷಿಗೆ ಅನುಕೂಲವಾಗುತ್ತದೆ. ಕಾಂಗ್ರ್ರೆಸ್ ಸರ್ಕಾರದಲ್ಲಿ ಬಡಜನತೆಗೆ ಉಚಿತವಾಗಿ 15 ಲಕ್ಷ ಮನೆ ನೀಡಲಾಗಿದೆ. ಬಿಜೆಪಿ ಸರ್ಕಾರ ಇಲ್ಲಿಯವರೆಗೆ ಒಂದೇ ಒಂದು ಮನೆ ನೀಡಲಿಲ್ಲ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಕೋಲಾರ ಜಿಲ್ಲೆಗೆ ಎತ್ತಿನಹೊಳೆ ನೀರು ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.