ನ್ಯೂಸ್

ಕಜಕಿಸ್ತಾನ್ ವಿಮಾನ ದುರಂತ 38 ಜನರ ಸಾವು; ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಅಪಘಾತ

ಮಾಸ್ಕೊ: ಕಜಕಿಸ್ತಾನದ ಅಕ್ಟಾವು ನಗರದಲ್ಲಿ ಬುಧವಾರ ಅಜರ್​ಬೈಜಾನಿ ವಿಮಾನವೊಂದು ದುರಂತಕ್ಕೀಡಾಗಿದ್ದು 38 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಮಾನದಲ್ಲಿ ಐದು ಸಿಬ್ಬಂದಿ ಸಹಿತ ಒಟ್ಟು 67 ಜನರಿದ್ದು ಆ ಪೈಕಿ 29 ಜನರು ಬದುಕುಳಿದಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಜಕಿಸ್ತಾನದ ತುರ್ತಪರಿಸ್ಥಿತಿ ಸಚಿವಾಲಯ ತಿಳಿಸಿದೆ. ವಿಮಾನದ ಇಬ್ಬರೂ ಪೈಲಟ್​ಗಳು ದುರಂತದಲ್ಲಿ ಮಡಿದಿದ್ದಾರೆಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರು ಹೇಳಿರುವುದಾಗಿ ರಷ್ಯಾ ಸುದ್ದಿಸಂಸ್ಥೆ ಇಂಟರ್​ಫ್ಯಾಕ್ಸ್ ವರದಿ ಮಾಡಿದೆ.

ಅಜರ್​ಬೈಜಾನ್ ಏರ್​ಲೈನ್ಸ್​ನ ಎಂಬ್ರೇರ್ 190 ವಿಮಾನ, ಅಕ್ಟಾವು ನಗರದಿಂದ 3 ಕಿ.ಮೀ. ದೂರದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿದಾಗ ಅಗ್ನಿಯುಂಡೆಯಾಗಿ ಉರುಳಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ದುರಂತದಲ್ಲಿ 25 ಜನರು ಬದುಕುಳಿದಿದ್ದಾರೆಂದು ಕಜಕ್​ಸ್ತಾನದ ತುರ್ತು ಸಚಿವಾಲಯ ಮೊದಲಿಗೆ ಹೇಳಿತ್ತು. ಆದರೆ, ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಅಪಾಯದಿಂದ ಪಾರಾದವರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಮೃತರ ಸಂಖ್ಯೆ ಮೊದಲು ಅಂದುಕೊಂಡಿದ್ದಕ್ಕಿಂತ ತಗ್ಗಿದೆ. ಕನಿಷ್ಠ 32 ಜನರು ಬದುಕುಳಿದಿದ್ದಾರೆಂದು ಅಜರ್​ಬೈಜಾನ್ ಪ್ರಾಸಿಕ್ಯೂಟರ್ ಜನರಲ್ ಕಚೇರಿ ನಂತರ ಹೇಳಿದೆ. ಆದರೆ, ಇದು ಅಂತಿಮ ಸಂಖ್ಯೆಯಲ್ಲ ಎಂದೂ ತಿಳಿಸಿದೆ. ಬದುಕುಳಿದವರ ಸಂಖ್ಯೆಯನ್ನು ನೋಡಿದರೆ ಕನಿಷ್ಠ 30 ಜನರು ವಿಮಾನ ದುರಂತದಲ್ಲಿ ಮಡಿದಿರುವುದು ಸ್ಪಷ್ಟವಾಗಿದೆ.

ಮೊಬೈಲ್ ಫೂಟೇಜ್: ವಿಮಾನವು ತುಂಬಾ ಎತ್ತರದಿಂದ ಇಳಿದು ಭೂಮಿಗೆ ಬಅಪ್ಪಳಿಸಿ ಬೆಂಕಿಯುಂಡೆಯಾಗಿ ಉರುಳಿದ್ದನ್ನು ಮೊಬೈಲ್ ಫೋನ್​ನಲ್ಲಿ ಚಿತ್ರಿತವಾಗಿರುವ ದೃಶ್ಯವೊಂದು ತೋರಿಸಿದೆ. ವಿಮಾನದ ರೆಕ್ಕೆಗಳು ಮತ್ತಿತರ ಭಾಗಗಳು ಪ್ರತ್ಯೇಕವಾಗಿ ಕಳಚಿ ಹುಲ್ಲಿನ ಮೇಲೆ ಬಿದ್ದ ಇನ್ನೊಂದು ಫೂಟೇಜ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಿಮಾನದ ಒಳಗಿದ್ದವರನ್ನು ಬದುಕುಳಿದವರು ಹೊರಗೆ ಎಳೆಯುತ್ತಿದ್ದ ದೃಶ್ಯಗಳು ಕೂಡ ಪ್ರಸಾರವಾಗಿವೆ.

ಬಾಕುನಿಂದ ಗ್ರಾನ್ಝಿಗೆ: ವಿಮಾನವು ಮೂಲತಃ ಅಜರ್​ಬೈಜಾನ್ ರಾಜಧಾನಿ ಬಾಕುನಿಂದ ರಷ್ಯಾದ ಉತ್ತರ ಕಾಕಸಸ್​ನ ಗ್ರಾನ್ಝಿ ನಗರಕ್ಕೆ ತೆರಳುತ್ತಿತ್ತು. ವಿಮಾನದಲ್ಲಿ ಅಜರ್​ಬೈಜಾನ್​ನ 37, ರಷ್ಯಾದ 16, ಕಜಕ್​ಸ್ತಾನದ ಆರು ಹಾಗೂ ರ್ಕಿಗಿಜಿಸ್ತಾನದ ಮೂರು ನಾಗರಿಕರು ಪ್ರಯಾಣಿಸುತ್ತಿದರೆಂದು ಅಜರ್​ಬೈಜಾನ್ ಏರ್​ಲೈನ್ಸ್ ತಿಳಿಸಿದೆ.

ಹಕ್ಕಿ ಬಡಿದು ದುರಂತ: ಹಕ್ಕಿಯೊಂದು ಬಡಿದಿದ್ದರಿಂದ ವಿಮಾನವನ್ನು ಅಕ್ಟಾವುಗೆ ತಿರುಗಿಸಲು ಪೈಲಟ್ ನಿರ್ಧರಿಸಿದ್ದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆಯೆಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ರೊಸಾವಿಸ್ಟಾಷಿಯಾ ಹೇಳಿದೆ. ಹಕ್ಕಿ ಬಡಿದಾಗ ಉಂಟಾದ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೈಲಟ್ ಈ ಕ್ರಮಕ್ಕೆ ಮುಂದಾಗಿದ್ದರು.