ನ್ಯೂಸ್

ಕರೂರು ಕಾಲ್ತುಳಿತದಲ್ಲಿ 'ಡ್ರ್ಯಾಗನ್'​ ನಟಿ ಆಪ್ತ ಸಾವು! ಇದೇ ನಿಜ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕಯಾದು ಲೋಹರ್ | Kayadu Lohar ​

Kayadu Lohar: ಶನಿವಾರ (ಸೆ.27) ಸಂಜೆ ತಮಿಳುನಾಡಿನ ಕರೂರಿನಲ್ಲಿ ನಟ ದಳಪತಿ ವಿಜಯ್ ಹಮ್ಮಿಕೊಂಡಿದ್ದ ರಾಜಕೀಯ ರ್‍ಯಾಲಿ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ದಾರುಣ ಅಂತ್ಯ ಕಂಡಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಕಾಲ್ತುಳಿತ ಪ್ರಕರಣ ಸದ್ಯ ಕೋರ್ಟ್​ ಮೆಟ್ಟಿಲೇರಿದ್ದು, ತಮಿಳುನಾಡು ರಾಜಕೀಯದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಗಿದೆ.

ಪ್ರಸ್ತುತ ತಮಿಳುನಾಡಿನಲ್ಲಿ ಕಾಲ್ತುಳಿತ ದುರಂತ ಭಾರಿ ಕೋಲಾಹಲ ಎಬ್ಬಿಸಿದ್ದು, ರಾಜಕೀಯ ಪಕ್ಷಗಳು ವಿಜಯ್​ ವಿರುದ್ಧ ಆರೋಪಗಳ ಸರಮಾಲೆಯನ್ನೇ ಕಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕಾರಣಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ದುರಂತದಲ್ಲಿ ಮಡಿದ ಅಮಾಯಕ ಜೀವಗಳಿಗೆ ಸಂತಾಪ ಸೂಚಿಸಿದ್ದಾರೆ. ತೀವ್ರ ರಾಜಕೀಯ ಗೊಂದಲಗಳ ಮಧ್ಯೆ ತಮಿಳಿನ ಯುವ ನಟಿಯ ಹೇಳಿಕೆಯೊಂದು ಸದ್ಯ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ತಮಿಳಿನ 'ಡ್ರ್ಯಾಗನ್'​ ಚಿತ್ರ ಖ್ಯಾತಿಯ ನಟಿ ಕಾಯಾದು ಲೋಹರ್, ಕರೂರು ಕಾಲ್ತುಳಿತ ದುರಂತದಲ್ಲಿ ತಮ್ಮ ಆಪ್ತರೊಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡ ಪೋಸ್ಟ್​ವೊಂದು ಜಾಲತಾಣಗಳಲ್ಲಿ ಹರಿದಾಡಿತು. ಇದಕ್ಕೆ ಮಿಡಿದ ನೆಟ್ಟಿಗರು, ನಟಿಯ ಪೋಸ್ಟ್​ಗೆ ಸಂತಾಪ ಸೂಚಿಸಿ, ಧೈರ್ಯ ತುಂಬಿದರು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಯುವ ನಟಿ​, "ಇದೆಲ್ಲವೂ ಶುದ್ಧ ಸುಳ್ಳು. ನನ್ನ ಹೆಸರಿನಲ್ಲಿ ಫೇಕ್​ ಪೋಸ್ಟ್​ ಹಂಚಿಕೊಳ್ಳಲಾಗಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.

"ಕರೂರಿನ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಿಗೆ ನನ್ನ ಸಂತಾಪಗಳು. ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಭಗವಂತ ಧೈರ್ಯ ನೀಡಲಿ. ಮೊದಲಿಗೆ ನನ್ನ ಹೆಸರಿನಲ್ಲಿ ಹರಿದಾಡುತ್ತಿರುವ ಟ್ವಿಟರ್​ ಪೋಸ್ಟ್​ ನಕಲಿಯಾಗಿದೆ. ಅದೊಂದು ಫೇಕ್​ ಸೋಷಿಯಲ್ ಮೀಡಿಯಾ ಪೋಸ್ಟ್. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕರೂರಿನಲ್ಲಿ ನನಗ್ಯಾರು ಆಪ್ತರಿಲ್ಲ. ಸುಖಾಸುಮ್ಮನೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಮತ್ತೊಮ್ಮೆ, ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಹೇಳಲು ಬಯಸುವೆ" ಎಂದು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).