ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ ಕಾವ್ಯಾಂ ವ್ಹಾಳೊ-14 ಶೀರ್ಷಿಕೆಯಡಿ ನಡೆದ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಕೊಂಕಣಿ ಭಾಷೆಯ ಕುಡುಬಿ ಸಮುದಾಯದ ಹಿರಿಯ ಕಲಾವಿದ ಕೆ. ಸುಂದರ ಗೌಡ ಇವರನ್ನು ಸನ್ಮಾನಿಲಾಯಿತು.
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ ಕಾವ್ಯಾಂ ವ್ಹಾಳೊ-14 ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು.
ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಕೊಂಕಣಿ ಭಾಷೆಯು ಜಾತಿ, ಮತ ಬೇಧವಿಲ್ಲದೆ ಎಲ್ಲಾ ಚೌಕಟ್ಟುಗಳನ್ನು ಮೀರಿ ಬೆಳೆದಿದೆ. ಎಲ್ಲಾ ಕೊಂಕಣಿಗರು ಅಕಾಡೆಮಿಯ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಬೇಕು ಎಂದರು.
ಪರಿಚಯ ಪಾಂಬೂರು ಇದರ ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ ಮಾತಾನಾಡಿ, ಕೊಂಕಣಿ ಒಂದು ಮಹಾನ್ ಭಾಷೆ. ಕರ್ನಾಟಕದ ಪ್ರಮುಖ ಧರ್ಮಗಳಾದ ಹಿಂದು, ಮುಸ್ಲಿಂ, ಕೈಸ್ತ ಸಮದಾಯಗಳ ಜನರು ಮಾತಾನಾಡುವ ಭಾಷೆ. ಯಾವುದೇ ಭಾಷೆ ಉಳಿಯಬೇಕಾದರೆ ಭಾಷೆಯ ಬಂಧನವಿಲ್ಲದೆ ಕಾಲಕಾಲಕ್ಕೆ ಬಲಾವಣೆಗಳನ್ನು ಸೇರಿಸಿಕೊಂಡು ಮುಂದೆ ಹೋಗಬೇಕು. ಬೇರೆ ಭಾಷೆಗಳ ಶಬ್ದಗಳನ್ನು ಬಳಸಿ, ನಮ್ಮ ಭಾಷೆಯನ್ನು ಶುದ್ಧವಾಗಿ ಮಾತಾನಾಡಲು ಪ್ರಯತ್ನಿಸಿದರೆ, ಭಾಷೆಯ ಬೆಳವಣಿಗೆಯಾಗುತ್ತದೆ. ಕೊಂಕಣಿ ಭಾಷೆ ವಿಸ್ತಾರವಾಗಿ ಖಾರ್ವಿ, ಸಿದ್ದಿ, ಕುಡುಬಿ, ಕಥೋಲಿಕರು ಹೀಗೆ ವಿವಿಧ ಸಮುದಾಯಗಳಲ್ಲಿ ಹರಡಿಕೊಂಡಿದೆ. ಎಲ್ಲ ಕೊಂಕಣಿ ಸಮುದಾಯಗಳು ಕೊಂಕಣಿ ಭಾಷೆಯ ಐಕ್ಯತೆಯನ್ನು ಗೌರವಿಸಿದರೆ, ಕೊಂಕಣಿ ತಾಯಿಯ ಆಶೀರ್ವಾದ ಖಂಡಿತ ನಮ್ಮೆಲ್ಲರ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಭಾಷಾ ಬೆಳವಣಿಗೆಯ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.
ಕೊಂಕಣಿ ಭಾಷೆಯ ಕುಡುಬಿ ಸಮುದಾಯದ ಹಿರಿಯ ಕಲಾವಿದ ಕೆ. ಸುಂದರ ಗೌಡ ಇವರನ್ನು ಸನ್ಮಾನಿಲಾಯಿತು. ಸದಸ್ಯ ನವೀನ್ ಲೋಬೊ ಉಪಸ್ಥಿತರಿದ್ದರು.
ಖ್ಯಾತ ಕವಿಗಳಾದ ಡಾ. ವೆಂಕಟೇಶ್ ನಾಯಕ್ ರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ಅವಿಲ್ ರಸ್ಕಿನ್ಹಾ, ಕುಸುಮ ಕಾಮತ್, ಸಂಜನಾ ಮಥಾಯಸ್, ಜೆರಿ ಬೊಂದೆಲ್, ಸುಮಾ ವಸಂತ್, ಪ್ರವೀಣ್ ತಾವ್ರೊ, ವಿಸ್ಮಯಾ ಲೋಬೊ, ಡಾ. ಸುಮತಿ ಕಾರ್ಕಳ ಇವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.