ಶಿವಮೊಗ್ಗ: ಕರ್ನಾಟಕ ಸಂಘ, ನಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಮತ್ತು ಬೆಂಗಳೂರಿನ ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಗಾಯಕ ಶಂಕರ ಶಾನುಭೋಗ್ ಅವರ ಪರಿಕಲ್ಪನೆಯ ಕಾವ್ಯ ಸಂಗೀತಯಾನ ಜು.21ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ಅಧ್ಯಕ್ಷೆ ಶಾಂತಾ ಎಸ್ ಶೆಟ್ಟಿ ಹೇಳಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಂಗೀತಯಾನ ಉದ್ಘಾಟಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜು ಅಧ್ಯಕ್ಷತೆ ವಹಿಸುವರು. ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥರೂ ಆದ ವಿದ್ವಾನ್ ಶಂಕರ್ ಶಾನುಭೋಗ್, ಟ್ರಸ್ಟಿ ಜಗದೀಶ್ ಕಾಮತ್ ಉಪಸ್ಥಿತರಿರುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರುಗುಹ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಎಚ್.ಎಸ್.ನಾಗರಾಜ್, ಹಿರಿಯ ಗಾಯಕ ಭದ್ರಾವತಿ ವಾಸು, ಉದ್ಯಮಿ ಟಿ.ಆರ್.ಅಶ್ವತ್ಥನಾರಾಯಣಶೆಟ್ಟಿ, ಪ್ರಮುಖರಾದ ಪುಷ್ಪಾ ಎಸ್. ಶೆಟ್ಟಿ, ಬಿ.ಆರ್.ಮಧುಸೂದನ್, ಎಸ್.ವಿ.ಚಂದ್ರಕಲಾ, ಡಾ.ಶುಭಾ ಮರುವಂತೆ, ವಾಸುದೇವ ಪೈ, ಲಕ್ಷ್ಮೀದೇವಿ ಗೋಪಿನಾಥ್, ಹರ್ಷ ಕಾಮತ್, ಶಬರೀಶ್ ಮತ್ತಿತರರು ವಿಶೇಷ ಆಹ್ವಾನಿತರಾಗಿದ್ದಾರೆ ಎಂದರು.
ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥ ವಿದ್ವಾನ್ ಶಂಕರ್ ಶಾನುಭೋಗ್ ಮಾತನಾಡಿ, ಸಾಹಿತ್ಯ ಮತ್ತು ಸಂಗೀತವು ಸುಸಂಸ್ಕೃತ ಸಮಾಜದ ಎರಡು ಕಣ್ಣುಗಳಿದ್ದಂತೆ. ಅವುಗಳ ಉದ್ದೇಶ ಕೇವಲ ಮನೋರಂಜನೆ ಆಗಿರದೇ ಮನೋವಿಕಾಸವೂ ಆಗಬೇಕು ಎನ್ನುವ ಉದ್ದೇಶದಿಂದ ಸೃಷ್ಟಿಯಾದ ವಿಶಿಷ್ಟ ಗಾಯನ ಪ್ರಕಾರವೇ ಕಾವ್ಯ ಸಂಗೀತ. ಕನ್ನಡದ ಶ್ರೇಷ್ಠ ಕವಿಗಳ ಸತ್ವಭರಿತ, ಮೌಲ್ಯಾಧಾರಿತ ಕಾವ್ಯವನ್ನು ಜನಮಾನಸಕ್ಕೆ ಸಂಗೀತದ ಲೇಪನದೊಂದಿಗೆ ತಲುಪಿಸಿ ಸಾತ್ವಿಕ ಸಮಾಜವನ್ನು ನಿರ್ಮಿಸುವುದೇ ಕಾವ್ಯ ಸಂಗೀತದ ಉದ್ದೇಶ ಮತ್ತು ಗುರಿಯಾಗಿದೆ ಎಂದರು.
ಷಟ್ಪದಿಗಳು, ವಚನಸಾಹಿತ್ಯ, ದಾಸಸಾಹಿತ್ಯ, ಚುಟುಕುಗಳು, ತತ್ವಪದಗಳು, ಭಾವಗೀತೆಗಳು, ದೇಶಭಕ್ತಿಗೀತೆಗಳು, ಜಾನಪದ ಸಾಹಿತ್ಯ ಮುಂತಾದ ಎಲ್ಲ ಕಾವ್ಯವೈವಿಧ್ಯಗಳನ್ನೂ ಕಾವ್ಯ ಸಂಗೀತವು ಅಳವಡಿಸಿಕೊಳ್ಳುತ್ತದೆ. ಶ್ರೋತೃಗಳನ್ನು ರಂಜಿಸುವ ಪ್ರಕ್ರಿಯೆಯ ಜತೆಜತೆಗೆ ಬೌದ್ಧಿಕವಾಗಿಯೂ, ನೈತಿಕವಾಗಿಯೂ ಜಾಗೃತಗೊಳಿಸಿ, ತನ್ಮೂಲಕ ಸಾತ್ವಿಕ ಸಮಾಜದ ನಿರ್ಮಾಣದಲ್ಲಿ ಕವಿಗಳನ್ನು ಸಂಗೀತಗಾರರನ್ನೂ ತೊಡಗಿಸಿಕೊಳ್ಳುವುದು ಕಾವ್ಯಸಂಗೀತದ ವಿಶೇಷ ಎಂದು ಹೇಳಿದರು. ಪ್ರಮುಖರಾದ ಎಸ್.ಶೋಭಾ, ಇ.ವಿಶ್ವಾಸ್, ವಿನಯ್ ಶಿವಮೊಗ್ಗ, ಜಿ.ವಿಜಯಕುಮಾರ್, ಉಮಾ ದಿಲೀಪ್ ಸುದ್ದಿಗೋಷ್ಠಿಯಲ್ಲಿದ್ದರು.
ಕಾವ್ಯಸಂಗೀತಯಾನ ಪುನಾರಂಭ
ಕಾವ್ಯ ಸಂಗೀತವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾವ್ಯ ಸಂಗೀತ ಗುರುಕುಲವು ಕಾವ್ಯಸಂಗೀತಯಾನವನ್ನು 2015ರ ಜೂ.15ರಂದು ಮೈಸೂರಿನ ಕಲಾಮಂದಿರದಲ್ಲಿ ಆರಂಭಿಸಲಾಗಿತ್ತು. ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಶಿವಮೊಗ್ಗದಿಂದಲೇ ಪುನಾರಂಭ ಮಾಡಲಾಗುತ್ತಿದೆ ಎಂದು ಶಂಕರ ಶಾನುಭೋಗ್ ಹೇಳಿದರು. ಮೊದಲ ಹಂತದಲ್ಲಿ 30 ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. 2ನೇ ಹಂತದಲ್ಲಿ 144 ತಾಲೂಕು, 3ನೇ ಹಂತದಲ್ಲಿ ಪ್ರತಿ ಹಳ್ಳಿಯಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಹದಾಸೆಯನ್ನು ಗುರುಕುಲ ಹೊಂದಿತ್ತು ಎಂದರು.