ಸಾಂದರ್ಭಿಕ ಚಿತ್ರ 
ನ್ಯೂಸ್

ಕಾವೇರಿ ವರಿ; ನಮ್ಮಲ್ಲೇ ನೀರಿಲ್ಲ, ನೀರು ಕೊಡುವುದು ಕಷ್ಟ ಎಂದ ಎಂ.ಬಿ ಪಾಟೀಲ್

ಬೆಂಗಳೂರು: ನಮ್ಮ ಡ್ಯಾಂಗಳಲ್ಲಿಯೇ ನೀರಿಲ್ಲ. ನಮಗಿಂತ ಉತ್ತಮ ಸ್ಥಿತಿಯಲ್ಲಿ ತಮಿಳುನಾಡು ಇದೆ. ಹೀಗಾಗಿ 5 ಸಾವಿರ ಕ್ಯುಸೆಕ್ ನೀರು ಬಿಡುವಂತದ್ದು ಆಗಬಾರದು. ಇದು ವೈಜ್ಞಾನಿಕವಾಗಿಲ್ಲ, ವಸ್ತುನಿಷ್ಠವೂ ಅಲ್ಲ ಎಂದು ಈ ಹಿಂದೆ ಜಲಸಂಪನ್ಮೂಲ ಖಾತೆ ನಿರ್ವಹಿಸಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾವೇರಿ ನಿರ್ವಹಣಾ ಪ್ರಾಧಿಕಾರದಿಂದ ಅತಿ ಶೀಘ್ರದಲ್ಲಿ ವಸ್ತುನಿಷ್ಠವಾಗಿರುವಂತ ವೈಜ್ಞಾನಿಕವಾಗಿ ಸಂಕಷ್ಟ ಸೂತ್ರ ರಚನೆ ಆಗಬೇಕು ಎಂದರು.

ಎರಡೂ ರಾಜ್ಯಗಳ ತಜ್ಞರನ್ನು ಭಾಗಿ ಮಾಡಿಕೊಳ್ಳಬೇಕು, ಹಿಂದೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಂಕಷ್ಟ ಸೂತ್ರವನ್ನು ಅತಿ ಬೇಗನೇ ಮಾಡಬೇಕು. ಈಗಿನ ಆದೇಶವನ್ನು ರದ್ದು ಮಾಡಬೇಕು ಅಂತ ಆಗ್ರಹಿಸುತ್ತೇವೆ ಎಂದು ಹೇಳಿದರು.

ನಾವು ಆದೇಶ ಪಾಲನೆ ಮಾಡದೇ ಹೋದರೆ ನಮ್ಮ ವಾದವನ್ನು ಕಾವೇರಿ ಅಥಾರಿಟಿ ಆಲಿಸುವುದೇ ಇಲ್ಲ. ನಮ್ಮಲ್ಲೇ ನೀರಿಲ್ಲ, ನೀರು ಕೊಡುವುದು ಕಷ್ಟ. ಸಂಕಷ್ಟ ಸೂತ್ರ ಇಲ್ಲ ಎಂಬ ಕಾರಣಕ್ಕೆ ಪದೇ ಪದೆ ಗೊಂದಲ ಆಗುತ್ತಿದೆ. ಸಂಕಷ್ಟ ಸೂತ್ರವೇ ಒಂದು ಗೊಂದಲ ಆಗಬಾರದು ಎಂದರು.