ಬೆಂಗಳೂರು: ಕಾವೇರಿ, ಮಹದಾಯಿ, ಮೇಕೆದಾಟು ವಿಚಾರದಲ್ಲಿ ನಾಡಿಗೆ ನ್ಯಾಯ ಒದಗಿಸುವ ಸಲುವಾಗಿ ಪ್ರಧಾನಿಯವರ ಬಳಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷದ ನಾಯಕರುಗಳ ಮತ್ತು ಸಂಸದರ ಅಭಿಪ್ರಾಯಗಳನ್ನು ಆಲಿಸಿ ಬಳಿಕ ಮಾತನಾಡಿದರು.
ಕನ್ನಡ ನಾಡು-ನುಡಿ-ಜಲ-ಭೂಮಿ-ಸಂಸ್ಕೃತಿಯ ಹಿತ ಕಾಪಾಡುವ ವಿಚಾರದಲ್ಲಿ ರಾಜಿಯ ಮಾತೇ ಇಲ್ಲ. 7 ಕೋಟಿ ಕನ್ನಡಿಗರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ವ ಪಕ್ಷಗಳೂ ಒಟ್ಟಾಗಿ ಶ್ರಮಿಸೋಣ. ಹೀಗಾಗಿ ಸರ್ವ ಪಕ್ಷ ನಿಯೋಗಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಮ್ಮ ರೈತರ ಹಿತವನ್ನು ಸಂಪೂರ್ಣ ಕಾಪಾಡಿದ್ದೇವೆ. ನಮ್ಮ ಬೆಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಕಾವೇರಿ ಪ್ರಾಧಿಕಾರದ 22 ಸಭೆ, ನಿಯಂತ್ರಣ ಸಮಿತಿಯಲ್ಲಿ 84 ಸಭೆಗಳು ನಡೆದಿವೆ. ರಾಜ್ಯವನ್ನು ಪ್ರತಿನಿಧಿಸುವ ಅಧಿಕಾರಿ ಮತ್ತು ವಕೀಲರ ತಂಡ ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಪ್ರಾಧಿಕಾರದ ಮುಂದೆ, ನಿಯಂತ್ರಣ ಸಮಿತಿ ಮುಂದೆ ಮಂಡಿಸಿದ್ದಾರೆ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದನ್ನು , ವಾಸ್ತವ ಸ್ಥಿತಿಯನ್ನು ಮಂಡಿಸಿದ್ದಾರೆ. ಇಲ್ಲಿಯವರೆಗೂ ನಾವು 24 ಟಿಎಂಸಿ ಮಾತ್ರ ಬಿಡುಗಡೆ ಮಾಡಿದ್ದೇವೆ. ನಿಗಧಿ ಮಾಡಿದ್ದಕ್ಕಿಂತ ಕಡಿಮೆ ನೀರು ಬಿಟ್ಟಿದ್ದೀವಿ. ಮೂರನೇ ಒಂದು ಭಾಗದಷ್ಟು ಮಾತ್ರ ನೀರು ಬಿಟ್ಟಿದ್ದೀವಿ ಅಷ್ಟೆ ಎಂದು ವಿವರಿಸಿದರು.
ನಾವು ಸಮರ್ಥ ವಾದ ಮಂಡಿಸಿದ್ದರಿಂದಲೇ ತಮಿಳುನಾಡಿನ ಬೇಡಿಕೆಗಿಂತ ಕಡಿಮೆ ನೀರು ಬಿಡಲು ಆದೇಶವಾಯಿತು. ಸಮರ್ಥ ವಾದ ಮಂಡಿಸದಿದ್ದರೆ ಆದೇಶದಲ್ಲಿನ ನೀರಿನ ಪ್ರಮಾಣ ಇನ್ನೂ ಹೆಚ್ಚಿರುತ್ತಿತ್ತು.
ನಾಡಿನ ರೈತರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ರಾಜಕೀಯವೂ ಇಲ್ಲ. ರಾಜಿಯೂ ಇಲ್ಲ ಎಂದರು.
ಮತ್ತೆ ಮಳೆ ಬರುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ ಸಂಕಷ್ಟ ಹಂಚಿಕೆ ಸೂತ್ರ ವೈಜ್ಞಾನಿಕವಾಗಿ ಆಗಲೇಬೇಕು.
ಮೇಕೆದಾಟು ಆದರೆ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡಿಮೆ ಮಾಡಬಹುದು ಎಂದು ಹೇಳಿದರು.