ಕಠ್ಮಂಡು: ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೊನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಆದಿಪುರುಷ್ ಬಿಡುಗಡೆಯಾದ ದಿನದಿಂದಲ್ಲೇ ಒಂದಿಲ್ಲೊಂದು ವಿವಾದಗಳಿಂದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.
ಸಿನಿಮಾ ಬಿಡುಗಡೆ ಬಳಿಕ ಹಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀತೆಯ ಕುರಿತ ಸಂಭಾಷಣೆಯನ್ನು ತೆಗೆಯುವಂತೆ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಸೇರಿದಂತೆ ಹಲವರು ಒತ್ತಾಯಿಸಿದ್ದರು.
ಆದಿಪುರುಷ್ ಸಿನಿಮಾದಲ್ಲಿ ಸೀತೆ ಭಾರತದ ಮಗಳು ಎಂಬ ಸಂಭಾಷಣೆ ಇದೆ. ಆದರೆ ಈ ಸಂಭಾಷಣೆಯನ್ನು ತೆಗೆಯುವಂತೆ ಕೆಲ ದಿನಗಳ ಹಿಂದೆ ನೇಪಾಳ ಸಿನಿಮಾ ಸೆನ್ಸಾರ್ ಬೋರ್ಡ್ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚಿಸಿತ್ತು. ಇಲ್ಲವಾದಲ್ಲಿ ಸಿನಿಮಾವನ್ನು ವ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿತ್ತು.
ಅದರಂತೆ. ಇದೀಗ ಕಠ್ಮಂಡುವಿನಲ್ಲಿ ಆದಿಪುರುಷ್ ಚಿತ್ರ ಸೇರಿದಂತೆ ಭಾರತದ ಯಾವ ಸಿನಿಮಾಗಳನ್ನು ಪ್ರದರ್ಶನ ಮಾಡದಂತೆ ನಿಷೇಧಿಸಿ ಅಲ್ಲಿನ ಮೇಯರ್ ಬಲೇನ್ ಶಾ ಆದೇಶ ಹೊರಡಿಸಿದ್ದಾರೆ. ಕಠ್ಮಂಡುವಿನಲ್ಲಿರುವ 17 ಚಿತ್ರಮಂದಿರಗಳಲ್ಲಿ ಭಾರತದ ಯಾವ ಚಲನಚಿತ್ರಗಳನ್ನು ಪ್ರದರ್ಶಿಸಬಾರದು ಎಂಬ ಆದೇಶವನ್ನು ನೀಡಲಾಗಿದೆ ಎಂದು ಬಲನ್ ಶಾ ಟ್ವೀಟ್ ಮಾಡಿದ್ದಾರೆ.
ಸೀತೆ ಭಾರತದ ಮಗಳು ಎಂಬ ಸಂಭಾಷಣೆಯನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ ಎಲ್ಲೆಡೆ ಪ್ರದರ್ಶಿತವಾಗುತ್ತಿರುವ ಆವೃತ್ತಿಗಳಿಂದಲೂ ತೆಗೆದಿಲ್ಲದ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ಕಠ್ಮಂಡುವಿನ ಮೇಯರ್ ಬಲನ್ ಶಾ ತಿಳಿಸಿದ್ದಾರೆ.