ಕಠ್ಮಂಡು: ನಿನ್ನೆ (ಸೆ.09) ಸಂಜೆ ಪ್ರತಿಭಟನಾಕಾರರು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಬಳಿಕ ನೇಪಾಳ ಸೇನೆಯು ವಿಮಾನ ನಿಲ್ದಾಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಪ್ರತಿಭಟನಾಕಾರರು ಸ್ಥಳೀಯ ಪ್ರದೇಶದ ಮನೆಗಳಿಗೆ ಬೆಂಕಿ ಹಚ್ಚಿದ ಬಳಿಕ, ಸರ್ಕಾರದ ಮುಖ್ಯ ಸಚಿವಾಲಯ ಕಟ್ಟಡವಾದ ಸಿಂಗ್‌ದರ್ಬಾರ್ ಅನ್ನು ಸಹ ಸೇನೆಯು ನಿಯಂತ್ರಣಕ್ಕೆ ತೆಗೆದುಕೊಂಡಿತು.
ಪ್ರತಿಭಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ನೇಪಾಳ ರಾಜಧಾನಿ ಕಠ್ಮಂಡು ಸೇರಿ ಇನ್ನೂ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿರುವ ಕಾರಣ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ ಎಂದು ಹೇಳಲಾಗಿದೆ. ನವದೆಹಲಿ ಮತ್ತು ಕಠ್ಮಂಡು ನಡುವೆ ದಿನಕ್ಕೆ ಆರು ವಿಮಾನಗಳನ್ನು ನಿರ್ವಹಿಸುತ್ತಿದ್ದ ಏರ್ ಇಂಡಿಯಾ ಮಂಗಳವಾರ ನಾಲ್ಕು ವಿಮಾನಗಳನ್ನು ರದ್ದುಗೊಳಿತು. ಇಂಡಿಗೊ ಮತ್ತು ನೇಪಾಳ ಏರ್‌ಲೈನ್ಸ್ ಸಂಸ್ಥೆಗಳು ಕೂಡ ದೆಹಲಿಯಿಂದ ಕಠ್ಮಂಡುವಿಗೆ ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ.
ಸೇನೆಯು ಸಂಕೀರ್ಣಕ್ಕೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ಸ್ಥಳಾಂತರಿಸಿದ ನಂತರ ನಿಯಂತ್ರಣವನ್ನು ತೆಗೆದುಕೊಂಡಿತು. ಅಲ್ಲಿನ ಪವಿತ್ರ ಪಶುಪತಿನಾಥ ದೇವಾಲಯದ ದ್ವಾರವನ್ನು ಧ್ವಂಸಗೊಳಿಸಲು ಪ್ರತಿಭಟನಾಕಾರರ ಗುಂಪೊಂದು ಪ್ರಯತ್ನಿಸಿದ ನಂತರ ಸೇನೆಯು ಮಧ್ಯಪ್ರವೇಶಿಸಿತು. ಮಂಗಳವಾರ ರಾತ್ರಿ 10 ಗಂಟೆಯಿಂದ ಭದ್ರತಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಳ್ಳುವುದಾಗಿ ನೇಪಾಳ ಸೇನೆ ಘೋಷಿಸಿತ್ತು.
ಇದನ್ನೂ ಓದಿ: ನೇಪಾಳದಲ್ಲಿ ಹಿಂಸಾಚಾರ; ಹಾಲಿ ಕೆ.ಪಿ.ಓಲಿ ಸರ್ಕಾರ ಪತನ; ಆಡಳಿತ ವಹಿಸಿಕೊಂಡ ಸೇನೆ | Army Takes Charge
(ಏಜೆನ್ಸೀಸ್)
ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧದ ಸರ್ಕಾರಿ ವಿರೋಧಿ ಪ್ರತಿಭಟನೆಯು ಭ್ರಷ್ಟಾಚಾರ ಮತ್ತು ಸರ್ಕಾರದಲ್ಲಿನ ಪಾರದರ್ಶಕತೆಯ ಕೊರತೆಯ ವಿರುದ್ಧದ ಸಂಪೂರ್ಣ ಚಳುವಳಿಯಾಗಿ ಮಾರ್ಪಟ್ಟ ನಂತರ ಕಳೆದ ಎರಡು ದಿನಗಳಿಂದ ನೇಪಾಳ ಬೀದಿಗಳಲ್ಲಿ ಆಘಾತಕಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.
ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ನಿರ್ದೇಶನಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೆಲವು ಗುಂಪುಗಳು ಕಠಿಣ ಪರಿಸ್ಥಿತಿಯ ಅನಗತ್ಯ ಲಾಭವನ್ನು ಪಡೆದುಕೊಂಡು ಸಾಮಾನ್ಯ ನಾಗರಿಕರು ಮತ್ತು ಸಾರ್ವಜನಿಕ ಆಸ್ತಿಗೆ ತೀವ್ರ ಹಾನಿಯನ್ನುಂಟುಮಾಡುತ್ತಿವೆ ಎಂದು ಸೇನೆ ಹೇಳಿದೆ.