ಜಯಪುರ: ಕಸ್ತೂರಿ ರಂಗನ್ ವರದಿ, ಸೆಕ್ಷನ್ 4, ಸೆಕ್ಷನ್ 17 ಅರಣ್ಯ ಕಾಯ್ದೆಗಳು ಬರಿ ಜಮೀನು ಉಳ್ಳವರ ಸಮಸ್ಯೆಯಲ್ಲ. ಇದು ಇಲ್ಲಿಯ ಪ್ರತಿಯೊಬ್ಬ ಜನಸಾಮಾನ್ಯರ ಸಮಸ್ಯೆಯಾಗಿದೆ ಎಂದು ಮೇಗುಂದಾ ಹೋಬಳಿ ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಸಂಚಾಲಕ ಕೌಳಿ ರಾಮು ಹೇಳಿದರು.
ಹಿರೇಗದ್ದೆ ಗ್ರಾಪಂನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಸ್ತೂರಿ ರಂಗನ್ ವರದಿ ಹಾಗೂ ಸೆಕ್ಷನ್ 4 ಅರಣ್ಯ ಕಾಯ್ದೆ ಮತ್ತು ಸಾಗುವಳಿ ಜಮೀನು ತೆರವಿನ ವಿರುದ್ಧ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಈ ಕಾಯ್ದೆಗಳು ಜಾರಿಯಾದರೆ ಜನರು ಸ್ವತಂತ್ರವಾಗಿ ನಮ್ಮ ನೆಲದಲ್ಲಿ ವಾಸಿಸುವ ಹಕ್ಕು ಕಳೆದುಕೊಳ್ಳುವ ಜತೆಗೆ ವಸತಿ ರಹಿತರು ನಿವೇಶನ ಪಡೆಯಲಾಗದೆ ಜೀವನಪೂರ್ತಿ ಬಾಡಿಗೆ ಮನೆಯಲ್ಲೇ ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದರು.
ಸಮಿತಿ ಅಧ್ಯಕ್ಷ ಅತ್ತಿಕುಳಿ ಸುಂದರೇಶ್ ಮಾತನಾಡಿ, ಮಲೆನಾಡಿನ ಜನರನ್ನು ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶ, ಸೆಕ್ಷನ್ 4 ಮತ್ತು ಸೆಕ್ಷನ್ 17ರ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಅರಣ್ಯ ರಕ್ಷಣೆ ನೆಪದಲ್ಲಿ ಸಣ್ಣ ರೈತರ ಕೃಷಿ ಜಮೀನು ಹಾಗೂ ಮನೆಗಳ ತೆರವಿಗೆ ಸರ್ಕಾರಗಳು ಆದೇಶ ಹೊರಡಿಸುತ್ತಿವೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮಾನ ಪಾತ್ರವಿದೆ ಎಂದರು.
ದುರಾಸೆಗಾಗಿ ಅರಣ್ಯ ನಾಶ ಮಾಡಿ ಎಕರೆಗಟ್ಟಲೆ ತೋಟ ಮಾಡುವವರ ಪರ ನಾವಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾನೂನಿಗೆ ತಿದ್ದುಪಡಿ ಮಾಡಿ ಇಲ್ಲಿನ ಜನರ ಬದುಕು ಉಳಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್, ಸದಸ್ಯ ಸಂದೀಪ್ ಚೌಡಿಕಟ್ಟೆ, ಹಿರೇಗದ್ದೆ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಸದಸ್ಯರಾದ ಸಾಗರ್ ದೀಪ್, ಸುರೇಶ್, ಆರ್‌ಐ ಸುಧೀರ್, ಪಿಡಿಒ ಸುಜಾತಾ ಹಾಗೂ ಗ್ರಾಮಸ್ಥರು ಇದ್ದರು.